ಮಂಡ್ಯ: ಸಹಕಾರಿ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಉಪನಿಬಂಧಕರ ಕುರಿತು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪುಡಿ ರೌಡಿಯಂತೆ ಹೇಳಿಕೆ ನೀಡಿದ್ದಾರೆ. ಇಂತಹ ದಬ್ಬಾಳಿಕೆ ಜಿಲ್ಲೆಯಲ್ಲಿ ನಡೆಯುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಎಚ್ಚರಿಕೆ ನೀಡಿದರು.
ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಗುಮಾಸ್ತ ಎಂದಿದ್ದಾರೆ. ಸಹಕಾರಿ ಸಂಘದ ಚುನಾವಣೆಯಲ್ಲಿ ಸೋಲಿನ ಹತಾಶೆ ಈಗಾಗಲೇ ಕಾಡಲಾರಂಭಿಸಿದೆ. ಇದರಿಂದಾಗಿ ಜೆಡಿಎಸ್ ಮತ್ತು ಬಿಜೆಪಿಯಿಂದ ನಕಲಿ ಹೋರಾಟ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಸದಸ್ಯತ್ವ ಅನರ್ಹಗೊಳಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದಲ್ಲಿ ಅದರ ವಿರುದ್ಧ ಕಾನೂನು ಹೋರಾಟ ಮಾಡಬೇಕು. ಅದನ್ನು ಹೊರತುಪಡಿಸಿ ಅಧಿಕಾರಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು. ಮಾತ್ರವಲ್ಲದೆ ಅಧಿಕಾರಿಯನ್ನು ಅಟ್ಟಾಡಿಸಿಕೊಂಡು ಓಡಿಸುವ ಹೇಳಿಕೆ ನೀಡಿ ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಹಾಕುವುದು ಸರಿಯಲ್ಲ. ಇಂತಹ ದೌರ್ಜನ್ಯ, ದಬ್ಬಾಳಿಕೆ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ ಎಂದರು.
ಮುಡಾ ಅಧ್ಯಕ್ಷ ನಹೀಂ, ಕಾಂಗ್ರೆಸ್ ನಗರಬ್ಲಾೃಕ್ ಅಧ್ಯಕ್ಷ ರುದ್ರಪ್ಪ, ಎಸ್ಸಿ ಮತ್ತು ಎಸ್ಟಿ ಘಟಕದ ಅಧ್ಯಕ್ಷ ಶ್ರೀಧರ್, ವಿಜಯ್‌ಕುಮಾರ್, ನಾಗರಾಜು, ರಾಮಚಂದ್ರು, ಅಪ್ಪಾಜಿಗೌಡ, ಶಿವಲಿಂಗೇಗೌಡ ಇದ್ದರು.