ಜಿಲ್ಲೆ

ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬದ್ಧತೆ ತೋರಲಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಒತ್ತಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಬರಗಾಲದಿಂದ ತತ್ತರಿಸಿರುವ ಹೊತ್ತಿನಲ್ಲಿ ಹಾಗೂ ಸರಿಯಾದ ಪ್ರಮಾಣ ಮಳೆಯಾಗದ ಪರಿಸ್ಥಿತಿಯಲ್ಲಿ ಜು.31ರವರೆಗೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಆದೇಶವನ್ನು ರದ್ದುಪಡಿಸಬೇಕೆಂದು ಮೈಷುಗರ್ ಅಧ್ಯಕ್ಷರೂ ಆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಒತ್ತಾಯಿಸಿದರು

ಲೋಕಸಭಾ ಚುನಾವಣೆ ಸಮಯದಲ್ಲಿ ಕಾವೇರಿ ನೀರಿನ ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದರು. ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದರು. ಅದರಂತೆ ಈಗ ತಮ್ಮ ಬದ್ಧತೆ ತೋರಿಸಬೇಕು. ಹಿಂದೊಮ್ಮೆ ಕಾವೇರಿ ನೀರಿನ ವಿವಾದ ಎದುರಾದಾಗ ಕೆಆರ್‌ಎಸ್ ಡ್ಯಾಂನ ಕೀಲಿಕೈ ಕೇಂದ್ರ ಸರ್ಕಾರದ ಬಳಿ ಎಂದು ಎಚ್‌ಡಿಕೆ ಹೇಳಿದ್ದರು. ಈಗ ಅವರೇ ಕೇಂದ್ರ ಸರ್ಕಾರದ ಭಾಗವಾಗಿರುವುದರಿಂದ ತುರ್ತು ಕ್ರಮ ವಹಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಇನ್ನು ಮೈಸೂರು ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ವಿಚಾರದ ಬಗ್ಗೆ ಪೂರ್ವಪರ ಯೋಚನೆ ಮಾಡದ ಎಚ್‌ಡಿಕೆ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ. ಇದು ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕನ ಬೆಳೆವಣಿಗೆ ಸಹಿಸದೇ ಮತ್ಸರ ಬುದ್ಧಿಯನ್ನು ತೋರಿಸಿದಂತಾಗಿದೆ. ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ಜಿಲ್ಲೆಯ ಜನರು ನೀಡಿರುವ ಅವಕಾಶವನ್ನು ಬಳಸಿಕೊಂಡು ಸಾವಿರಾರೂ ಉದ್ಯೋಗ ಸೃಷ್ಟಿಸುವಂತಹ ಕೈಗಾರಿಕೆಗಳನ್ನು ಪ್ರಾರಂಭಿಸಲಿ ಎಂದರು.

ಹಿಂದೆ ಸಿಎಂ ಆಗಿದ್ದ ವೇಳೆ ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ರಾಜ್ಯದ ಜನರಿಂದ ಪಡೆದ ಅಹವಾಲು ಏನಾಗಿದೆ ಎಂಬುದನ್ನು ಎಚ್‌ಡಿಕೆ ಬಹಿರಂಗಪಡಿಸಬೇಕು. ಇನ್ನು ಎಚ್‌ಡಿಕೆ ಪ್ರತಿನಿಧಿಸಿದ ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಜನತಾದರ್ಶನ ಮಾಡಿದಾಗ 10 ಸಾವಿರ ಅರ್ಜಿ ಬಂದಿದೆ. ಆದರೆ ಮಂಡ್ಯದಲ್ಲಿ ಸ್ವತಃ ಎಚ್‌ಡಿಕೆ ನಡೆಸಿದ ಜನತಾದರ್ಶನದಲ್ಲಿ ಮೂರು ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ಆದ್ದರಿಂದ ಆ ಸಮಸ್ಯೆಗಳನ್ನು ಬಗೆಹರಿಸಿ. ಅದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.

ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಚಿನಕುರಳಿ ರಮೇಶ್, ದೇಶಹಳ್ಳಿ ಮೋಹನ್, ರಾಜೇಶ್ ಇದ್ದರು.