ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಉನ್ನತ ಅಧಿಕಾರಿಗಳೊಂದಿಗೆ ಶುಕ್ರವಾರ ಜಿಲ್ಲೆಯ ವಿವಿಧ ನೆರೆ ಪೀಡಿತ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಸಿಇಒ ಡಾ.ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ತಸೀಲ್ದಾರ್‌ಗಳು ಇದ್ದರು 
ಜಿಲ್ಲೆ

ನೆರೆ, ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ : 41 ಮಂದಿ ಎರಡು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ

ವಿಜಯವಾಣಿ ಸುದ್ದಿಜಾಲ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಉನ್ನತ ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ನೆರೆ ಪೀಡಿತ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.

ಸ್ಥಳೀಯರೊಂದಿಗೆ ಅಹವಾಲು ಆಲಿಸಿದ ಅವರು, ನೆರೆ ಪೀಡಿತ ಪ್ರದೇಶಗಳು ಹಾಗೂ ಸಂಭಾವ್ಯ ನೆರೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೆರೆ ಪ್ರದೇಶಗಳ ನಿವಾಸಿಗಳ ಸ್ಥಳಾಂತರ ಮತ್ತು ಕಾಳಜಿ ಕೇಂದ್ರಗಳ ಸ್ಥಾಪನೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಜ್ಪೆ ಅದ್ಯಪಾಡಿ, ಬಂಟ್ವಾಳ, ಆಲಡ್ಕ, ಉಪ್ಪಿನಂಗಡಿ ಮತ್ತಿತರ ಕಡೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಅದ್ಯಪಾಡಿಯಲ್ಲಿ ದೋಣಿಯಲ್ಲಿ ಸಂಚರಿಸಿ ನೆರೆ ಪರಿಸ್ಥಿತಿ ವೀಕ್ಷಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

41 ಮಂದಿ ಸ್ಥಳಾಂತರ

ಮಂಗಳೂರು ತಾಲೂಕಿನ ಪಂಜಿಮೊಗರು ಮತ್ತು ಕಡಬ ತಾಲೂಕಿನಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳಿಗೆ ಜಲಾವೃತ ಪ್ರದೇಶಗಳಲ್ಲಿ ವಾಸವಿದ್ದ 41 ಮಂದಿ ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ನೆರೆ ಪೀಡಿತ ಅದ್ಯಪಾಡಿ ಪ್ರದೇಶದಲ್ಲಿ ಇದ್ದ ಮಹಿಳೆಯರು, ಮಕ್ಕಳು ಮತ್ತು ಹಿರಿಯರನ್ನು ಸ್ಥಳಾಂತರಿಸಲು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪ್ರಯತ್ನಿಸಿದ್ದು, ಸ್ಥಳೀಯರು ಒಪ್ಪಿಲ್ಲ.

ಅದ್ಯಪಾಡಿಯಲ್ಲಿ 35ರಷ್ಟು ಮನೆಗಳಲ್ಲಿ 70ರಷ್ಟು ಜನರು ವಾಸವಿದ್ದಾರೆ. ಸ್ಥಳೀಯರು ಕಳೆದ 10 ವರ್ಷಗಳಿಂದ ನೆರೆ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಆದರೂ ಈ ಪ್ರದೇಶದಲ್ಲಿರುವ ಗರ್ಭಿಣಿಯರು, ವಯಸ್ಸಾದವರು ಹಾಗೂ ಮಕ್ಕಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಸ್ಥಳೀಯರ ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ಪ್ರಾಕೃತಿಕ ವಿಪತ್ತು ನಿರ್ವಹಣಾ ಸಮಿತಿ ಪಡೆ ಸದಸ್ಯರು ಸ್ಥಳದಲ್ಲಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ. 11 ಬೋಟುಗಳು ಇಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ.-ಮುಲ್ಲೈ ಮುಗಿಲನ್, ದ.ಕ. ಜಿಲ್ಲಾಧಿಕಾರಿ