ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ನ್ನು ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ನಡೆಸಲು ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂನ್ 14 ರಿಂದ 22ರವರೆಗೆ ಜಿಲ್ಲೆಯಲ್ಲಿ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸುಮಾರು 8,060 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕುಡಿಯುವ ಶುದ್ಧ ನೀರು, ಬೆಂಚ್, ಮಧ್ಯಾಹ್ನದ ಬಿಸಿಯೂಟ, ಸಾರಿಗೆ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಪರೀಕ್ಷಾ ದಿನಗಳಂದು ಆಯಾ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ತಹಸೀಲ್ದಾರ್‌ರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ವಿಶೇಷ ವಿಚಕ್ಷಣಾ ದಳದ ಕರ್ತವ್ಯಗಳನ್ನು ತಪ್ಪದೆ ನಿರ್ವಹಿಸಬೇಕು. ತಪ್ಪಿದಲ್ಲಿ ಪರೀಕ್ಷಾ ಮಂಡಳಿಯ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸುವುದರೊಂದಿಗೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಪರೀಕ್ಷಾ ದಿನಗಳಂದು ಹೆಸ್ಕಾಂ ಇಲಾಖೆಯು ಸಮರ್ಪಕವಾಗಿ ವಿದ್ಯುತ್ ಪೂರೈಸುವುದರೊಂದಿಗೆ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷಾ ಕೊಠಡಿ ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಸ್ಥಾನಿಕ ಜಾಗೃತ ದಳ ಹಾಗೂ ಮೊಬೈಲ್ ಸ್ವಾದೀನ ದಳಗಳ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಕುರಿತು ನಿಗಾ ವಹಿಸಬೇಕು, ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ವಿದ್ಯುತ್ ತೊಂದರೆಯಾಗದ ರೀತಿ ಜನರೇಟರ್ ಇಲ್ಲವೆ ಯುಪಿಎಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಹೊರಗಡೆಯ 200ಮೀ ಅಳತೆಯಲ್ಲಿ ನಿಷೇಧಾಜ್ಷೆ ಜಾರಿಯಿದ್ದು, ಅದಕ್ಕೆ ಅವಶ್ಯಕವಾದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್ ಅಧಿಕಾರಿಗಳ ಸಹಕಾರ ಕೋರುವಂತೆ ಅವರು ಸೂಚಿಸಿದರು.
ಡಿಡಿಪಿಐ ಉಮಾದೇವಿ ಸೊನ್ನದ, ಪೊಲೀಸ್ ಅಧಿಕಾರಿ ಪರಮೇಶ್ವರ ಕವಟಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.