ವಿಜಯಪುರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಸಬೇಕು. ಸಕಾಲಕ್ಕೆ ನೀರಿನ ಲಭ್ಯತೆಯಾಗಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗ್ರಾಮಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕೆಂದರು.
ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಅದಕ್ಕಾಗಿ ಮುಂಚಿತವಾಗಿಯೇ ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಸರ್ಕಾರಿ ಶಾಲೆ, ಆಸ್ಪತ್ರೆ, ವಸತಿ ನಿಲಯ, ಕೊಳವೆ ಬಾವಿಗಳನ್ನು ಮತ್ತು ನಗರ ಹಾಗೂ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಬೇಕು ಎಂದರು.
ಜನರಿಗೆ ಸ್ವಚ್ಛ ಕುಡಿಯುವ ನೀರು ಪೂರೈಸಬೇಕು. ನೀರು ಪೂರೈಸುವ ಮೊದಲು ನೀರಿನ ಸಂಗ್ರಾಹಾಗಾರಗಳನ್ನು ಪರಿಶೀಲಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯತವಾಗಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಸಂಗ್ರಹಿತ ನೀರನ್ನು ಪರೀಕ್ಷಿಸಿ ಪರಿಶೀಲಿಸಿ ಕುಡಿಯಲು ಬಳಸಲು ಯೋಗ್ಯವಾಗಿದೆ ಎಂದು ತಿಳಿದುಕೊಂಡು ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರು ಪೂರೈಕೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಗಳು ಕುಡಿಯುವ ನೀರಿನ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಈಗಾಗಲೇ ಸೂಚಿಸಿದ್ದಾರೆ. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು. ನಿಷ್ಕಾಳಜಿ ವಹಿಸಬಾರದು. ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಜನ ಜಾನುವಾರುವಿನ ಜೀವ ಹಾನಿಯಾದ ಸಂದರ್ಭದಲ್ಲಿ ನಿಯಮಾನುಸಾರ ಪರಿಹಾರ ಒದಗಿಸಬೇಕು. ಮನೆ ಹಾನಿ ವಿವರ ಮಾಹಿತಿಯನ್ನು ಸಂಗ್ರಹಿಸಬೇಕು. ತ್ರಿಸದಸ್ಯ ಸಮಿತಿ ತಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅತಿವೃಷ್ಟಿ ಸಂದರ್ಭ ಉಂಟಾದರೆ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಹೇಳಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಎಲ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 2023 ರಿಂದ ಜುಲೈ 10ರವರೆಗೆ ವಾಡಿಕೆ ಮಳೆ 173 ಮಿಮೀ ಇದ್ದು, 147.40 ಮಿಮೀ ಮಳೆ ಆಗಿದೆ. ಅಂದರೆ ಶೇ.15ರಷ್ಟು ಮಳೆ ಪ್ರಮಾಣ ಕಡಿಮೆ ಆಗಿದೆ. ಜೂನ್ ಮಾಹೆಯಲ್ಲಿ ವಾಡಿಕೆ ಮಳೆ 90 ಮಿಮೀ ಇದ್ದು ಜಿಲ್ಲಾದ್ಯಂತ 38 ಮಿಮೀ ಮಾತ್ರ ಮಳೆಯಾಗಿದ್ದು, ಶೇ.59ರಷ್ಟು ಕಡಿಮೆಯಾಗಿರುತ್ತದೆ. ಮುಂಗಾರು ಹಂಗಾಮಿಗೆ ಮೊದಲ ಜೂನ್‌ದಿಂದ 10 ಜುಲೈವರೆಗ 110 ಮಿಮೀ ವಾಡಿಕೆ ಮಳೆಗೆ 58 ಮಿಮೀ ಮಳೆಯಾಗಿದ್ದು ಶೇ.47ರಷ್ಟು ಕೊರತೆಯಾಗಿದೆ. ಮುಂಗಾರು ಬಿತ್ತನೆ ಕ್ಷೇತ್ರ 736794 ಹೆಕ್ಟೇರ್ ಗುರಿ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ ತೊಗರಿ, ಹೆಸರು, ಉದ್ದು, ಮುಸುಕಿನ ಜೋಳ, ಸೂರ್ಯಕಾಂತಿ, ಸಜ್ಜೆ ಕಬ್ಬು ಮುಖ್ಯ ಬೆಳೆಗಳಾಗಿರುತ್ತವೆ. ಇಲ್ಲಿಯವರೆಗೆ 103433 ಹೆಕ್ಟೇರ್‌ಗಳಲ್ಲಿ ಶೇ.14.04 ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ 9759.99 ಕ್ವಿಂಟಾಲ್ ಮತ್ತು ರಸಗೊಬ್ಬರ 74203.61 ಮೆಟ್ರಿಕ್ ಟನ್‌ನಷ್ಟು ದಾಸ್ತಾನು ಇರುತ್ತದೆ. ಸದ್ಯಕ್ಕೆ ಕೊರತೆ ಇರುವುದಿಲ್ಲ ಎಂದರು.
ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಅಶೋಕ ಎಸ್. ಗೋಣಸಗಿ ಮಾತನಾಡಿ, ಪ್ರಾಣಿಗಳಲ್ಲಿ ಕಂಡುಬರುವ ಚರ್ಮಗಂಟು ರೋಗಕ್ಕೆ ಲಸಿಕೆ ನೀಡಿರುವುದಾಗಿ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಇಂಡಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಸೌದಾಗರ್ ಮತ್ತಿತರರಿದ್ದರು.