ಮಂಡ್ಯ: ಸರ್ಕಾರ ಹಾಗೂ ಸಾರ್ವಜನಿಕ ಕೆಲಸದಲ್ಲಿ ನಿರಾಸಕ್ತಿ ತೋರುವಂತಿಲ್ಲ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳು ಸಕಾಲ ಸೇವೆಯಲ್ಲಿ ಸಿಂಧುತ್ವ ಅರ್ಜಿಯನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡದೆ ವಿಳಂಬ ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಕಾಲ ನಾಗರಿಕ ಸೇವೆಗಳನ್ನು ನಿಗದಿತ ಕಾಲದೊಳಗೆ ಪಡೆಯಲು ಸಹಾಯ ಮಾಡುವ ಒಂದು ಯೋಜನೆ. ಆದ್ದರಿಂದ ಅಧಿಕಾರಿಗಳು ವಿಳಂಬ ಮಾಡದೆ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಸಕಾಲ ಯೋಜನೆಯಡಿ ಸ್ವೀಕೃತವಾಗಿರುವ ಸಿಂಧುತ್ವ ಅರ್ಜಿಗಳ ಪೈಕಿ ಜಾತಿ ಪರಿಶೀಲನಾ ಪ್ರಮಾಣ ಪತ್ರ ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ಅವಧಿ ಮೀರಿ ಬಾಕಿ ಉಳಿದಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಜಿಲ್ಲಾಡಳಿತದ ಗಮನಕ್ಕೆ ಕಂಡುಬಂದಿದೆ. ಜತೆಗೆ ಅಧಿಕಾರಿಗಳು ಸಕಾಲದ ರ‌್ಯಾಂಕಿಂಗ್ ಪ್ರಗತಿಯನ್ನು ಸಾಧಿಸುತ್ತಿಲ್ಲ. ಕೂಡಲೇ ಬಾಕಿ ಉಳಿದಿರುವ ಸಿಂಧುತ್ವ ಅರ್ಜಿಗಳನ್ನು ವಿಲೇವಾರಿ ಮಾಡಿ ಮಾಹಿತಿಯನ್ನು ಸಲ್ಲಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಸಕಾಲದಲ್ಲಿ ಬರುವ ಸಾರ್ವಜನಿಕ ಸೇವೆಯನ್ನು ನೀಡಬೇಕು. ಯಾವುದೇ ರೀತಿಯ ಅಸಡ್ಡೆ ತೋರಿಸಿದರೆ ನೋಟಿಸ್ ಜಾರಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಡಿಡಿಪಿಐ ಶಿವರಾಮೇಗೌಡ ಇತರರಿದ್ದರು.