ಜಿಲ್ಲೆ

ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಈಗಿನಿಂದಲೇ ತಯಾರಿಗೆ ಜಿಲ್ಲಾಧಿಕಾರಿ ಸೂಚನೆ

Hassan - Ramesh H R

ಹಾಸನ: ಹಾಸನಾಂಬ ದೇವಿ ಕೀರ್ತಿ ಪ್ರಪಂಚದಾದ್ಯಂತ ಪಸರಿಸಿದ್ದು, 2025ರಲ್ಲಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅಗತ್ಯವಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿಸಲು ಈಗಿನಿಂದಲೇ ತಯಾರಿ ಅಗತ್ಯವಿದೆ ಎಂದು ತಿಳಿಸಿದರು.

ದೇವಾಲಯದ ಎಡಭಾಗದಲ್ಲಿರುವ ಹಳೆಯ ಮನೆಗಳನ್ನು ನೇರ ಖರೀದಿಗೆ ಒಪ್ಪಿಕೊಡುವುದಾದರೆ ಕ್ರಮವಹಿಸುವಂತೆ ದೇವಾಲಯದ ಆಡಳಿತಾಧಿಕಾರಿಗೆ ಸೂಚಿಸಿದರಲ್ಲದೆ, ಅಗತ್ಯವಿದ್ದರೆ ಭೂಸ್ವಾಧೀನಕ್ಕೆ ಕ್ರಮವಹಿಸುವಂತೆ ನಿರ್ದೇಶನ ನೀಡಿದರು. ಈ ಬಾರಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದ ಜಾಗವನ್ನು ಸಹ ಖರೀದಿಗೆ ಕ್ರಮ ವಹಿಸುವಂತೆ ತಿಳಿಸಿದರು. ದೇವಾಲಯದ ದುರಸ್ತಿ, ದೇವಾಲಯಕ್ಕೆ ಬಣ್ಣ, ಬ್ಯಾರಿಕೇಡ್ ಪ್ರತಿಯೊಂದನ್ನು ಜವಾಬ್ದಾರಿಯಿಂದ ನಿರ್ವಹಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

1000, 500 ರೂ. ಟಿಕೆಟ್ ಹಾಗೂ ಧರ್ಮ ದರ್ಶನಕ್ಕೆ ಪ್ರತ್ಯೇಕ ಸರದಿ ಸಾಲಿನಲ್ಲಿ ಭಕ್ತಾದಿಗಳು ಸಾಗಲು 2 ಕಿ.ಮೀ ವರೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲು ಕ್ರಮವಹಿಸಿ. ದೇವಾಲಯದ ಆವರಣ ಹಾಗೂ ಹೊರ ಆವರಣದ ಸ್ವಚ್ಛತೆ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯನ್ನು ಒಂದು ಉತ್ತಮ ಏಜೆನ್ಸಿಗೆ ಹೊರಗುತ್ತಿಗೆ ನೀಡಿ ನಿರ್ವಹಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ತಿಳಿಸಿದರು. ಹೆಲಿ ಟೂರಿಸಂ, ಹೂವಿನ ಆಲಂಕಾರ, ಫಲ ಪುಷ್ಪ ಪ್ರದರ್ಶನ, ಲೈಟಿಂಗ್ ವ್ಯವಸ್ಥೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಬಾರಿ ಇಸ್ಕಾನ್ ದೇವಾಲಯದವರು ದೊನ್ನೆ ಪ್ರಸಾದ ಹಾಗೂ ಲಡ್ಡು ಪ್ರಸಾದವನ್ನು ಉತ್ತಮ ಗುಣಮಟ್ಟದಲ್ಲಿ ಭಕ್ತಾಧಿಗಳಿಗೆ ನೀಡಿದ್ದಾರೆ. ಅವರ ಸೇವೆ ಬಹಳ ಅಚ್ಚುಕಟ್ಟು ಹಾಗೂ ಉತ್ತಮವಾಗಿತ್ತು. ಈ ಬಾರಿಯೂ ಪ್ರಸಾದ ವಿತರಣೆಗೆ ಇಸ್ಕಾನ್ ಅವರಿಗೆ ನೀಡಬಹುದಾಗಿದೆ ಎಂದರು.

ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಸುಜಯ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.