ಜಿಲ್ಲೆ

ನದಿ ಪಾತ್ರದ ಜನರ ಸುರಕ್ಷತೆಗೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚನೆ

ಮೈಸೂರು: ಈಗಾಗಲೇ ಕಬಿನಿ ಜಲಾಶಯದಿಂದ 70,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನುಗು ಡ್ಯಾಂನಿಂದಲೂ ನೀರನ್ನು ಹೊರಬಿಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ನದಿ ಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿ, ಮುಂದಿನ ಶನಿವಾರ (ಜು.20)ದೊಳಗೆ ಕೆ.ಆರ್.ಎಸ್. ಜಲಾಶಯದಿಂದ ನೀರನ್ನು ಹೊರಬಿಡುವ ಸಂಭವ ಇದೆ. ಹೀಗಾಗಿ ತಿ.ನರಸೀಪುರ ತಾಲೂಕು ಹಾಗೂ ನಂಜನಗೂಡಿನ ನದಿ ಪಾತ್ರದ ಜನರ ಸುರಕ್ಷತೆಗಾಗಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದರು.


ಇಂದಿನಿಂದಲೇ ಅಧಿಕಾರಿಗಳು ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ಜಾಗರೂಕರಾಗಿ ಇರುವಂತೆ ಹಾಗೂ ನದಿಯ ಎರಡೂ ದಂಡೆಗಳಲ್ಲಿನ ಸಾರ್ವಜನಿಕರು ಹಾಗೂ ಜಾನುವಾರುಗಳ ರಕ್ಷಣೆಗಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ತಿಳಿಸಬೇಕು.


ಅತಿಯಾದ ಮಳೆಯಿಂದ ಹಾನಿ ಉಂಟಾಗಿ ಯಾವುದೇ ಅಚಾತುರ್ಯ ಹಾಗೂ ಪ್ರಾಣಹಾನಿ ಸಂಭವಿಸದಂತೆ ಮೊದಲೇ ಪರಿಸ್ಥಿತಿಯನ್ನು ಅರಿತು ಅಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲು ಅಗತ್ಯ ಕ್ರಮ ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಬೇಕಾಗುವಂತಹ ಎಲ್ಲ ಸೌಕರ್ಯ ಒದಗಿಸಬೇಕು. ಉತ್ತಮ ಆಹಾರ, ಶುದ್ಧ ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಅಗತ್ಯ ಕ್ರಮ ಹಿಂದಿನಿಂದಲೇ ಕೈಗೊಳ್ಳಬೇಕು ಎಂದು ಸೂಚಿಸಿದರು.


ಗ್ರಾಮೀಣ ಪ್ರದೇಶದಲ್ಲಿ ಅತಿಯಾದ ಮಳೆ-ಗಾಳಿಯಿಂದ ಮರಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಂದರ್ಭ ಉಂಟಾಗುತ್ತದೆ. ಇಂತಹ ಸನ್ನಿವೇಶಗಳು ಎದುರಾಗುವ ಮೊದಲೇ ಅವುಗಳಿಗೆ ಪರ್ಯಾಯ ಹುಡುಕಿ ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೆಸ್ಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.


ನಗರ ಸ್ಥಳೀಯ ಸಂಸ್ಥೆಗಳು ಅಧಿಕ ಮಳೆ ಹಾಗೂ ಗಾಳಿಗೆ ಬೀಳುವ ಮರಗಳನ್ನು ಗುರುತಿಸಿ ಅವುಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಅಲ್ಲದೇ, ಹಲವಾರು ಕಡೆ ವಾಟರ್ ಬ್ಲಾಕಿಂಗ್ ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣವೇ ಪರಿಹರಿಸಲು ನೈಟ್ ಟೀಮ್ ನೇಮಕ ಮಾಡಬೇಕು ಎಂದು ನಿರ್ದೇಶಿಸಿದರು.


ಈಗಾಗಲೇ ನಂಜನಗೂಡು, ಸರಗೂರು ತಾಲೂಕುಗಳಲ್ಲಿ ಧಾರಾಕಾರ ಮಳೆಯಿಂದಾಗಿ ಸೇತುವೆಗಿಂತಲೂ ಮೇಲೆ ನೀರು ಹರಿಯುತ್ತಿದೆ. ಆದ್ದರಿಂದ ಅಲ್ಲಿನ ಜನರಿಗೆ ಹಾನಿ ಉಂಟಾಗುವ ಸಂಭವ ಇದೆ. ಅಧಿಕಾರಿಗಳು ಸಾರ್ವಜನಿಕರು ಬ್ರಿಡ್ಜ್ ಪ್ರದೇಶದಲ್ಲಿ ಓಡಾಡದಂತೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಕುಡಿಯುವ ನೀರನ್ನು ಸರಬರಾಜು ಮಾಡುವ ಮೊದಲು ಅದರ ಗುಣಮಟ್ಟವನ್ನು ನಿತ್ಯವೂ ಪರೀಕ್ಷಿಸಬೇಕು. ಈ ವಿಷಯವಾಗಿ ಅಧಿಕಾರಿಗಳು ಯಾವುದೇ ನಿರ್ಲಕ್ಷೃ ತೋರದೆ ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಬೇಕು ಎಂದು ಹೇಳಿದರು.


ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕಂದಾಯ ಇಲಾಖೆಯವರು ಮಳೆಹಾನಿ ಸಂಭವಿಸಿದ್ದಲ್ಲಿ ಅವುಗಳ ಬಗ್ಗೆ ತಕ್ಷಣವೇ ಮಾಹಿತಿ ನೀಡಬೇಕು. ಜತೆಗೆ ತ್ವರಿತ ಪರಿಹಾರ ದೊರಕಿಸಲು ಮುಂದಾಗಬೇಕು. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಹಾನಿ ಉಂಟಾಗಿದ್ದರೆ, ಆ ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದರು.
ಮಕ್ಕಳಿಗೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ತಡೆಯಲು ಶಿಥಿಲಗೊಂಡ ಶಾಲೆ ಹಾಗೂ ಅಂಗನವಾಡಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಗತ್ಯವಿರುವ ಔಷಧ ಇಟ್ಟುಕೊಳ್ಳಬೇಕು. ಒಂದು ವೇಳೆ ಆರೋಗ್ಯ ಸಮಸ್ಯೆಯಾದರೆ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ನಂಜನಗೂಡು, ಎಚ್.ಡಿ. ಕೋಟೆ, ಸರಗೂರು ತಾಲೂಕಿನ ತಹಸೀಲ್ದಾರರು, ಇನ್ನಿತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.