ಜಿಲ್ಲೆ

ನೋಡಲ್ ಅಧಿಕಾರಿಗಳು ಕಚೇರಿ ಬಿಟ್ಟು ಹೊರಬನ್ನಿ : ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಾಕೀತು

ತುಮಕೂರು: ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತೀ ತಾಲೂಕಿಗೆ ಇಬ್ಬರು ಅಥವಾ ನಾಲ್ವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದ್ದು, ಈ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕೆಲಸ ಮಾಡುವ ಬದಲು ಪ್ರತಿ ತಾಲೂಕುಗಳಿಗೆ ಪ್ರತೀ ದಿನ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

ಕರೊನಾ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಗತ್ಯ ಸೇವೆಗಳ ಇಲಾಖೆಗಳ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದ್ದು, ಕೂಲಿ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ತೆರೆಯಲಾಗಿರುವ ವಸತಿ ಕೇಂದ್ರಗಳಿಗೆ ಗುತ್ತಿಗೆದಾರರು ಹಾಗೂ ಮಾಲೀಕರು ಮಾಡಿರುವ ವಸತಿ ಕೇಂದ್ರಗಳಿಗೆ ಹಾಗೂ ಅಲೆಮಾರಿ ಕ್ಯಾಂಪ್‌ಗಳಲ್ಲಿ ವಸತಿ, ಊಟ, ವೈದ್ಯಕೀಯ ನೆರವು, ಮೂಲ ಸೌಲಭ್ಯಗಳ ಬಗ್ಗೆ ಛಾಯಾಚಿತ್ರದೊಂದಿಗೆ ವರದಿಯನ್ನು ಜಿಲ್ಲಾಡಳಿತಕ್ಕೆ ಪ್ರತಿ ದಿನ ಅಪ್ಡೇಡ್ ಮಾಡುವಂತೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಅಲೆಮಾರಿ ಜನರ ಕ್ಯಾಂಪ್‌ಗಳಲ್ಲಿರುವ ಜನರಿಗೆ ಆಹಾರ, ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದ್ದು, ಯಾವುದೇ ಲೋಪವಾಗದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ರಾಕೇಶ್ ಕುಮಾರ್ ಆದೇಶಿಸಿದರು.

ಜಿಲ್ಲಾಡಳಿತದಿಂದ, ಖಾಸಗಿಯವರಿಂದ ಕೂಲಿಕಾರ್ಮಿಕರಿಗೆ ಈವರೆಗೆ ನೀಡುತ್ತಿರುವ ಸೌಕರ್ಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಬೇಕು. ತುರ್ತು ಹಾಗೂ ಅನಿವಾರ್ಯವಾಗಿರುವುದರಿಂದ ಇಂದಿನಿಂದಲೇ ನಿಯೋಜಿತ ಅಧಿಕಾರಿಗಳು ನಿಗದಿತ ತಾಲೂಕುಗಳಿಗೆ ಭೇಟಿ ನೀಡಿ ಕಾರ್ಯಾರಂಭ ಮಾಡಬೇಕು ಎಂದರು. ಬೇರೆ ಜಿಲ್ಲೆ, ರಾಜ್ಯಗಳಿಂದ ಕೂಲಿಗಾಗಿ ಬಂದಿರುವ ಕಾರ್ಮಿಕರ ಯೋಗಕ್ಷೇಮವನ್ನೂ ನೋಡಿಕೊಳ್ಳುವುದು ಎಲ್ಲ ಅಧಿಕಾರಿಗಳ ಕರ್ತವ್ಯವಾಗಿದೆ. ಇದಕ್ಕೆ ಸನ್ನದ್ಧರಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಜತೆಗೆ ಸ್ವಯಂರಕ್ಷಣೆಯ ಬಗ್ಗೆಯೂ ಸಹ ಗಮನ ಹರಿಸಬೇಕಾಗಿದೆ ಎಂದು ಸಲಹೆ ನೀಡಿದರು.

953 ವಲಸೆ ಕಾರ್ಮಿಕರು: ಜಿಲ್ಲೆಯಲ್ಲಿ ಈವರೆಗೆ 953 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದೆ. ಇನ್ನೂ ಗುತ್ತಿಗೆದಾರರು ಹಾಗೂ ಮಾಲೀಕರುಗಳ ಹತ್ತಿರ ಕೆಲಸ ಮಾಡುತ್ತಿರುವ 3377 ಕಾರ್ಮಿಕರಿದ್ದು ಈ ಸಂಖ್ಯೆ ಹೆಚ್ಚಾಗಲಿದೆ ಎಂದು ರಾಕೇಶ್ ಕುಮಾರ್ ತಿಳಿಸಿದರು. ಹಣ್ಣು, ತರಕಾರಿ, ಕೃಷಿ ಉತ್ಪನ್ನ, ಅಗತ್ಯ ದಿನಸಿ ಮತ್ತು ಅತ್ಯಗತ್ಯ ಸಲಕರಣೆಗಳ ಸಾಗಾಣಿಕೆಗೆ ಯಾವುದೇ ಅಡೆ ತಡೆ ಹಾಕದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ಮನೆಮನೆಗೆ ಕರೊನಾ ಮಾಹಿತಿ : ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರು ಹಾಗೂ ಅವರ ಸಂಪರ್ಕದಲ್ಲಿರುವವರು ಸ್ವಯಂ ಮಾಹಿತಿ ನೀಡುವಂತೆ ಹಾಗೂ ಕರೊನಾ ವೈರಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿಯುಳ್ಳ ಕರಪತ್ರವನ್ನು ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮನೆಮನೆಗೆ ನೀಡಿ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಮಂಡಳಿಯ ಮೂಲಕ ಅರಿವು ಮೂಡಿಸಲಾಗುತ್ತಿದೆ. ಕರಪತ್ರಗಳನ್ನು ಕನ್ನಡ, ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿ, ಅಲ್ಪಸಂಖ್ಯಾತರ ಮನೆ ಮನೆಗಳಿಗೆ ಹಂಚಿಕೆ ಮಾಡಿ ಕರೊನಾ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ನಮ್ಮ ಹಳ್ಳಿ ರೇಡಿಯೋನಲ್ಲಿ ಜಾಗೃತಿ: ನಮ್ಮ ಹಳ್ಳಿ ರೇಡಿಯೋ ಎಂಬ ರೇಡಿಯೋ ಹ್ಯಾಂನಲ್ಲಿ ಕರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಗುಡ್ಡಗಾಡು, ಅರಣ್ಯ ಪ್ರದೇಶಗಳಲ್ಲಿರುವ ಗ್ರಾಮಗಳಿಗೆ ಈ ಹಳ್ಳಿ ರೇಡಿಯೋ ಕಾರ್ಯಕ್ರಮದ ಮೂಲಕ ಕರೊನಾ ಮುಂಜಾಗ್ರತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ರೇಡಿಯೋ ಹ್ಯಾಂ ತನ್ನ ಸ್ಥಾನದಿಂದ 300 ಮೀಟರ್ ವ್ಯಾಪ್ತಿಯಲ್ಲಿ ತನ್ನ ಪ್ರಸಾರ ಕೇಳಬಹುದಾಗಿದೆ. ತಮ್ಮ ಮನೆಯಲ್ಲಿಯೇ ಕುಳಿತು ವೈಫೈ ಸೌಲಭ್ಯವಿರುವ ಮೊಬೈಲ್‌ಗಳಲ್ಲಿ ಈ ಕಾರ್ಯಕ್ರಮವನ್ನು ಆಲಿಸಬಹುದಾಗಿದೆ. ಪ್ರತಿನಿತ್ಯ 80 ಕಿ.ಮೀ. ಸಂಚರಿಸುವ ಗುರಿ ಹೊಂದಲಾಗಿದೆ.

ವಸತಿ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿ ಮಹಿಳೆಯರು, ವೃದ್ಧರು ಇರುವುದರಿಂದ ಅವರಿಗೆ ಊಟ, ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಿ ಅಗತ್ಯವಿದ್ದವರಿಗೆ ಔಷಧೋಪಚಾರ ನೀಡಬೇಕು. ಜತೆಗೆ ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಶೌಚಗೃಹ, ಸ್ನಾನಗೃಹ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆ ಬಗ್ಗೆಯೂ ಗಮನಹರಿಸಬೇಕು. ಡಾ.ಕೆ.ರಾಕೇಶ್ ಕುಮಾರ್ ಡಿಸಿ