ಜಿಲ್ಲೆ

ಕ್ಯಾನ್ಸರ್ ಆಸ್ಪತ್ರೆಗೆ 5.65 ಕೋಟಿ ರೂ ಬಿಡುಗಡೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಮಂಡ್ಯ: ಅನುದಾನದ ಕೊರತೆಯಿಂದ ಮಿಮ್ಸ್ ಕ್ಯಾನ್ಸರ್ ಆಸ್ಪತ್ರೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಈ ಸಂಬಂಧ ಹಲವು ಬಾರಿ ಸಭೆಗಳನ್ನು ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ 5.65 ಕೋಟಿ ರೂ ಬಿಡುಗಡೆಯಾಗಿದೆ. ಇದರಿಂದ ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಭೇಟಿ ನೀಡಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಪರಿಶೀಲಿಸಿ ಮತ್ತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಅವರ ಆದೇಶದ ಮೇರೆಗೆ ಉಳಿದಿರುವ ಸಿವಿಲ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಇನ್ನು 2-3 ದಿನಗಳಲ್ಲಿ ಸಿವಿಲ್ ಕಾಮಗಾರಿ ಪ್ರಾರಂಭ ಮಾಡಲು ಸೂಚಿಸಿದರು.

ಕ್ಯಾನ್ಸರ್ ಕೇಂದ್ರಕ್ಕೆ ಸಂಬಂಧಪಟ್ಟ ಉಪಕರಣಗಳ ಖರೀದಿಗೆ ಟೆಂಡರ್ ಕರೆಯುವುದು ಮತ್ತು ಸಿಬ್ಬಂದಿ ನೇಮಕಾತಿ, ಗ್ರಂಥಾಲಯ, ಪರೀಕ್ಷಾ ಕೊಠಡಿ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಹಾಗೂ ಅವರನ್ನು ಆರೈಕೆ ಮಾಡಲು ಬರುವವರಿಗೆ ಶೌಚಗೃಹ ಮತ್ತು ಸ್ನಾನಗೃಹದ ಕೊರತೆಯ ಬಗ್ಗೆ ತಿಳಿಸಿದ್ದರು. ಅದರಂತೆ ಕಟ್ಟಡ ನಿರ್ಮಾಣ ಜಾಗ ಗುರುತಿಸಿ ಕ್ರಮ ಕೈಗೊಳ್ಳಬೇಕು. ರೋಗಿಗಳ ಜತೆ ಬರುವ ಸಹಾಯಕರಿಗೆ ವಿಶ್ರಾಂತಿ ತಾಣ ನಿರ್ಮಿಸಲು ಯೋಜನೆ ರೂಪಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕೈಗಾರಿಕೆ ಸಂಸ್ಥೆಗಳ ಸಿಎಸ್‌ಆರ್ ಅನುದಾನ ಅಥವಾ ದಾನಿಗಳನ್ನು ಬಳಸಿಕೊಳ್ಳಬಹುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಆಡಳಿತಾಧಿಕಾರಿ ಡಾ.ಜಾನ್ಸನ್, ಆರೋಗ್ಯ ಇಲಾಖೆಯ ಡಾ. ಸೋಮಶೇಖರ್, ಬೆಟ್ಟಸ್ವಾಮಿ ಇತರರಿದ್ದರು.