ಜಿಲ್ಲೆ

ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಬುದ್ಧಿಸ್ಟ್ ಸಮಾವೇಶ: ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲಾ ಬುದ್ಧಿಸ್ಟ್ ಸಮಾವೇಶವನ್ನು ಆಯೋಜಿಸಲು ನಿರ್ಣಯಿಸಲಾಗಿದೆ ಎಂದು ಜಿಲ್ಲಾ ಬುದ್ಧ ಒಕ್ಕೂಟದ ಗೌರವಾಧ್ಯಕ್ಷರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ತಿಳಿಸಿದರು.

ಬೌದ್ಧ ಧರ್ಮ ಜನರು ನಂಬುವ ಮಾನವ ಧರ್ಮವಾಗಿದೆ. ಯುವ ಜನಾಂಗ ಈ ಧರ್ಮದತ್ತ ಆಕರ್ಷಿತವಾಗುತ್ತಿದ್ದಾರೆ. ತತ್ವ ಮತ್ತು ಸಿದ್ಧಾಂತದ ಮೇಲೆ ಈ ಧರ್ಮ ಸ್ಥಾಪಿತವಾಗಿದೆ. ಈ ಧರ್ಮದ ಹೆಸರಿನಲ್ಲಿ ಸಂಘಟನೆಗಳು ಸ್ಥಾಪಿತಗೊಂಡಿದ್ದು, ಆದರೆ ಬಲಿಷ್ಠವಾಗಿಲ್ಲ. ಹಾಗಾಗಿ ಜಿಲ್ಲಾ ಬುದ್ಧ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮದು ಜಾತ್ಯತೀತ ಸಂಘಟನೆ. ಈ ಬಗ್ಗೆ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾಮಟ್ಟದ ಬೃಹತ್ ಸಮಾವೇಶದ ಪೂರ್ವಭಾವಿಯಾಗಿ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳು ಮತ್ತು ಪಂಚಾಯಿತಿ ಕೇಂದ್ರಗಳಲ್ಲಿ ಸಮಿತಿಯನ್ನು ರಚಿಸಿ ಸಭೆ ನಡೆಸಲಾಗುವುದು. ಸಾಹಿತ್ಯ, ಕಾನೂನು ಸೇರಿದಂತೆ ಇನ್ನಿತರ ಸಮಿತಿ ರಚಿಸಲಾಗಿದ್ದು, ಸಮಾವೇಶ ಯಶಸ್ಸಿಗೆ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದರು.

ಸಾಹಿತಿ ಕೆ.ಮಾಯಿಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೌದ್ಧ ಧರ್ಮ ಅಳಿಸಿ ಹೋಗುತ್ತಿದ್ದರೂ ಮತ್ತೆ ಪುನಶ್ಚೇತನಗೊಳ್ಳುತ್ತಿದೆ. ಮನುಷ್ಯನಲ್ಲಿ ಶಾಂತಿ, ಸೌಹಾರ್ದತೆ, ಸಹೋದರತೆ, ಸಮಾನತೆ ಇರಬೇಕು. ಅಂತಹ ತತ್ವಗಳಿರುವ ಧರ್ಮ ಬೌದ್ಧ ಧರ್ಮವಾಗಿದೆ. ಇದು ಬಂದೂಕಿನಿಂದ ಹೆದರಿಸಿ ಮತಾಂತರ ಮಾಡುವ ಧರ್ಮವಲ್ಲ. ಬೌದ್ಧ ಧರ್ಮ ಕೋಮು ಸೀಮಿತ ಧರ್ಮವಲ್ಲ. ಶ್ರೇಣೀಕೃತ, ಮೇಲು-ಕೇಳು ಎನ್ನುವ ಧರ್ಮವಲ್ಲ. ಎಲ್ಲರೂ ಬದುಕುವ ಧರ್ಮವಾಗಿದೆ ಎಂದು ಹೇಳಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ಸಮಾನತೆ, ಸಹಬಾಳ್ವೆಗೆ ಬುದ್ಧನ ಸಂದೇಶ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರಗತಿಪರ ಚಿಂತಕರು, ಬುದ್ಧನ ಅನುಯಾಯಿಗಳು ಬುದ್ಧನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಬೌದ್ಧ ಸಮ್ಮೇಳನವನ್ನು ಆಚರಿಸಲು ನಿರ್ಧರಿಸಿದ್ದು, ಕಾರ್ಯಕರ್ತರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು .

ಒಕ್ಕೂಟದ ದೇವರಾಜ್ ಕೊಪ್ಪ, ಅಭಿಗೌಡ, ಪ್ರಕಾಶ್ ಬ್ಯಾಡರಹಳ್ಳಿ, ಟಿ.ಎಸ್.ಕಾಳಯ್ಯ ಹಾಜರಿದ್ದರು.