ವಿಜಯವಾಣಿ ಸುದ್ದಿಜಾಲ ಉಡುಪಿ
ಕಾರ್ಮಿಕರಿಗೆ ವೈದ್ಯಕೀಕಿಯ ನೆರವಿನ ಇಎಸ್ಐ ಯೋಜನೆ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ವಿಳಂಬ ನೀತಿ ಖಂಡಿಸಿ ಹಾಗೂ ಸೌಲಭ್ಯ ಸಮರ್ಪಕವಾಗಿ ಲಭಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿಯ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ವತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಶುಕ್ರವಾರ (ಅ.24) ಮನವಿ ಸಲ್ಲಿಸಲಾಯಿತು.
ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಅರುಣಕುಮಾರ್ ಬಾಣ ಮಾತನಾಡಿ, ರಾಜ್ಯ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಇಎಸ್ಐ ಯೋಜನೆಯನ್ನು ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಒಪ್ಪಂದ ಮತ್ತು ನೋಂದಣಿ ಮಾಡಿಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ನೋಂದಣಿಗೆ ಉತ್ಸುಕರಾಗಿದ್ದರೂ ಸಹ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕಾರ್ಮಿಕರು ಚಿಕಿತ್ಸೆಗೆ ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಮಾತನಾಡಿ, ಕಾರ್ಮಿಕರಿಂದ ಭಾಗಶ: ಹಣ ಹಾಗೂ ಕಾರ್ಮಿಕರು ದುಡಿಯುತ್ತಿರುವ ಕಾರ್ಖಾನೆಗಳ ಮಾಲೀಕರಿಂದ ಉಳಿಕೆ ಹಣ ಪಾವತಿಸಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಆದರೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅರ್ಹರು ಇಎಸ್ಐ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯಪ್ರವೇಶಿಸಿ, ಕಾರ್ಮಿಕ ಸಚಿವರಿಗೆ ಸೂಕ್ತ ನಿರ್ದೇಶನ ಕೊಟ್ಟು ಇಎಸ್ಐ ಸೌಲಭ್ಯದಿಂದ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ವತಿಯಿಂದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಕೋಷ್ಠದ ಪ್ರಮುಖರಾದ ಅಲೆವೂರು ಶ್ರೀಕಾಂತ ನಾಯಕ, ಜ್ಯೋತಿ ಉದಯಕುಮಾರ್, ಸಂತೋಷ ಪೂಜಾರಿ ನೇರಳಕಟ್ಟೆ, ನಳಿನಿ ಪ್ರದೀಪ, ಸಂಧ್ಯಾ ರಮೇಶ, ಕಿರಣ ಪೂಜಾರಿ ತೆಕ್ಕಟ್ಟೆ, ಸಂತೋಷ ಶೆಟ್ಟಿ ಕುಂದಾಪುರ, ಶೈಲೇಂದ್ರ ಮಣಿಪಾಲ, ಸುಧೀರ ಕೆ.ಎಸ್. ಸತೀಶ ಪೂಜಾರಿ ವಕ್ವಾಡಿ, ಸುರೇಂದ್ರ ಕಾಂಚನ್, ಲೀಲಾ ಪೂಜಾರಿ ಇತರರಿದ್ದರು.
ಉಡುಪಿ ಜಿಲ್ಲೆಯ ಬಿಜೆಪಿಯ ಎಲ್ಲ ಶಾಸಕರು ಮತ್ತು ಸಂಸದರ ಮೂಲಕ ಒತ್ತಡ ಹೇರಿದ್ದರಿಂದ ನ.15ರ ವರೆಗೆ ಮಾತ್ರ ಇಎಸ್ಐ ಸೌಲಭ್ಯ ವಿಸ್ತರಿಸಲಾಗಿದೆ. ನಂತರ ಮತ್ತೆ ರೋಗಿಗಳು ಪರದಾಡುವ ಸಾಧ್ಯತೆಯಿದೆ. ಸರ್ಕಾರ ಇನ್ನಾದರೂ ಬಡ ಕಾರ್ಮಿಕರಿಗೆ ತೊಂದರೆ ಕೊಡದೆ ಕನಿಷ್ಠ 3ರಿಂದ 5 ವರ್ಷದ ವರೆಗೆ ಸೌಲಭ್ಯ ವಿಸ್ತರಿಸಬೇಕು. | ಅರುಣಕುಮಾರ್ ಬಾಣ. ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ.