ಅಥಣಿ: ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದರೂ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಕರ್ನಾಟಕ ರಾಜ್ಯೋತ್ಸವ ದಿನದಂದು ಮತ್ತೆ ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಎಂಇಎಸ್ ಪುಂಡರ ಮೇಲೆ ಜಿಲ್ಲಾಡಳಿತ ಶಿಸ್ತುಕ್ರಮ ಜರುಗಿಸಿ, ಗಡಿಪಾರು ಮಾಡಬೇಕು ಎಂದು ಎಚ್. ಶಿವರಾಮೆಗೌಡರ ಬಣದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಸಾರಿಗೆ ಬಸ್ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿ ಎಂಇಎಸ್ ಪುಂಡರ ವಿರುದ್ದ ಘೋಷಣೆ ಕೂಗಿದರು.
ಕರವೇ ತಾಲೂಕಾಧ್ಯ ಉದಯ ಮಾಕಾಣಿ, ಜಿಲ್ಲಾ ಮುಖಂಡ ಜಗನ್ನಾಥ ಬಾಮನೆ ಮಾತನಾಡಿ, ಬೆಳಗಾವಿ ಗಡಿ ಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಎಂಇಎಸ್ನವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನ ಮತ್ತು ಸುವರ್ಣ ವಿಧಾನಸೌಧದ ಅಧಿವೇಶನದ ಸಂದರ್ಭದಲ್ಲಿ ಮಹಾಮೇಳ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಯಾವುದೇ ಅನುಮತಿ ನೀಡದಿದ್ದರೂ ಇಂತಹ ದುಷ್ಟ ಕಾರ್ಯ ಮಾಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿರುವುದನ್ನು ನಾವು ಸಹಿಸುವುದಿಲ್ಲ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ಎಂಇಎಸ್ ಮುಖಂಡರಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಗುಡುಗಿದರು. ಸಿದ್ದು ಹಂಡಗಿ, ಅನಿಲ ಒಡೆಯರ, ವಿನಯ ಪಾಟೀಲ, ರಾಕೇಶ ಸೌದಾಗರ ಸೇರಿದರು.