DC OFFICE 
ಜಿಲ್ಲೆ

ಜನರ ಮನವಿ ಆಲಿಸಲು ಜಿಲ್ಲಾಡಳಿತ ದೂರ! *4 ತಿಂಗಳಲ್ಲಿ ಕೇವಲ 6732 ಮಾತ್ರ ಸಲ್ಲಿಕೆ

ರಾಚಯ್ಯ ಸ್ವಾಮಿ ಮಾಚನೂರು

 ರಾಯಚೂರು ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳ ಆಲಿಸಲು ಜಿಲ್ಲಾಡಳಿತ ದೂರವಾಯಿತೇ ಎನ್ನುವ ಪ್ರಶ್ನೆ ಉದ್ಭವಿಸಿರುವ ಮಧ್ಯೆ ಕಚೇರಿಯ ಅಧಿಕಾರಿ, ಸಿಬ್ಬಂದಿ ಒತ್ತಡ ಮುಕ್ತವಾಗಿ ಸೇವೆ ಸಲ್ಲಿಸುತ್ತಿರುವ ಸಂತೃಪ್ತಿಯಲ್ಲಿದ್ದಾರೆ. ಈ ಹಿಂದೆ ವಿವಿಧ ಸಮಸ್ಯೆಗಳ ಪರಿಹಾರ ಮಾಡುವಂತೆ ಜಿಲ್ಲಾಡಳಿತಕ್ಕೆ ತಿಂಗಳಿಗೆ 2300 ವರೆಗೆ ಮನವಿ ಪತ್ರಗಳು ಬರುತ್ತಿದ್ದವು. ಆದರೆ ಹೊರವಲಯದ ಯಕ್ಲಾಸಪುರಕ್ಕೆ ಜಿಲ್ಲಾಡಳಿತ ಭವನ ವರ್ಗವಣೆಯಾಗಿದ್ದರಿಂದ ಕೇವಲ 1300 ರಿಂದ 1800 ಮನವಿಗಳು ಬರುತಿದ್ದು, ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ.

ಮೂರು ತಿಂಗಳಲ್ಲಿ ಎಷ್ಟು ಮನವಿ

ಈ ಹಿಂದೆ ಹಳೆ ಜಿಲ್ಲಾಡಳಿತ ಭವನದಲ್ಲಿ ಪ್ರತಿ ನಿತ್ಯ 100 ರಿಂದ 150 ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ವಿವಿಧ ಸಂಘಟನೆಗಳು,ಜನಸಾಮಾನ್ಯರು ಮನವಿಗಳನ್ನು ಸಲ್ಲಿಸುತ್ತಿದ್ದರು. ಕಳೆದ 2024 ರ ನವೆಂಬರ್‌ನಲ್ಲಿ 2148, ಡಿಸೆಂಬರ್‌ನಲ್ಲಿ 2360 ಸೇರಿ ಒಟ್ಟು 4508 ಮನವಿಗಳು ಬಂದಿದ್ದವು, ಆದರೆ ಜಿಲ್ಲಾಡಳಿತ ಭವನ ಹೊರವಲಯದ ಯಕ್ಲಾಸ್‌ಪುರಕ್ಕೆ ವರ್ಗವಣೆಯಾದ ನಂತರ ಜನವರಿಂದ ಮೇ 29ರವರೆಗೆ ಕೇವಲ 6,732 ಮನವಿಗಳು ಮಾತ್ರ ಸಲ್ಲಿಕೆಯಾಗಿವೆ. ಇದರಲ್ಲಿ ಶೇ.70 ರಷ್ಟು ಅಂಚೆ ಮೂಲಕ ಬಂದರೆ, ಶೇ.30 ರಷ್ಟು ಜನರು ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ.

ಮನವಿ ಪತ್ರ ಕಡಿಮೆಯಾಗಲು ಕಾರಣವೇನು?

ಈ ಹಿಂದೆ ಜಿಲ್ಲಾಡಳಿತ ಕಚೇರಿಗೆ ತೆರಳು ಜನಸಾಮಾನ್ಯರಿಗೆ ಅನುಕೂಲವಾಗಿತ್ತು, ದೂರದ ಊರಿನಿಂದ ಆಗಮಿಸುವವರಿಗೆ ಸಾರಿಗೆ ಬಸ್ ವ್ಯವಸ್ತೆ ಇತ್ತು. ಇದರಿಂದ ಯಾವುದೇ ಸಮಸ್ಯೆಯಾಗಿರಲ್ಲಿಲ್ಲ. ಆದರೆ ಜನವರಿಯಲ್ಲಿ ನಗರದಿಂದ ಸ್ಥಳಾಂತರಗೊಂಡ ಜಿಲ್ಲಾಡಳಿತ ಭವನ ಬರೊಬ್ಬರಿ ಮೂರುವರೆ ಕಿಲೋ ಮೀಟರ್ ದೂರವಿದ್ದು, ಅಲ್ಲಿಗೆ ತಲುಪಲು ನೂರಾರು ರೂಪಾಯಿ ಖರ್ಚು ಮಾಡುವ ಅನಿವಾರ್ಯತೆಗೆ ಜನ ಸಿಲುಕಿದ್ದಾರೆ. ಸಾರಿಗೆ ಬಸ್ ಸರಿಯಾದ ಸಮಯಕ್ಕೆ ಇಲ್ಲದೆ ಇರುವುದರಿಂದ ಆಟೋ ಹತ್ತಿ ಹೋಗುವುದು ದುಸ್ಸಾಹಸವೆ ಆಗಿದೆ. ಇದರಿಂದ ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಂಚೆ ಮೂಲಕ ಕಳುಹಿಸುತ್ತಿರುವುದರಿಂದ ಮನವಿಗಳ ಸಂಖ್ಯೆ ಕಡಿಮೆಯಾಗಿದೆ.

ತಹಸೀಲ್ದಾರ್‌ಗೆ ಕಿರಿಕಿರಿ

ಜಿಲ್ಲಾಡಳಿತ ಹೊರವಲಯದಲ್ಲಿ ಸ್ಥಳಾಂತರವಾಗಿರುವುದರಿಂದ ಸ್ಥಳೀಯ ಹೋರಾಟಗಾರರು ಸ್ಥಳೀಯ ಸಮಸ್ಯೆಗಳಲ್ಲದೆ ಜಿಲ್ಲೆಯ ಸಮಸ್ಯೆಗಳನ್ನು ರಾಯಚೂರು ತಾಲೂಕಿನ ತಹಸೀಲ್ದಾರ್‌ಗೆ ಮನವಿ ಸಲ್ಲಿಸುತ್ತಿಸುತ್ತಿದ್ದು, ಕೇವಲ ರಾಯಚೂರು ತಾಲೂಕಿನ ಸಮಸ್ಯೆಗಳಿದ್ದರೆ ಮಾತ್ರ ಮನವಿ ತಹಸೀಲ್ದಾರ್ ಸ್ವೀಕಾರ ಮಾಡುತ್ತಿದ್ದಾರೆ. ಇದರಲ್ಲಿ ಜಿಲ್ಲಾಮಟ್ಟದ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಎಷ್ಟು ಇಲಾಖೆಗಳು ಕಾರ್ಯ ನಿರ್ವಹಣೆ

ನೂತನ ಜಿಲ್ಲಾಡಳಿತ ಭವನದಲ್ಲಿ ಪ್ರಸ್ತುತವಾಗಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಎಸಿ ಕಚೇರಿ, ಖಜಾನೆ, ಡಿಡಿಎಲ್‌ಆರ್, ಡಿಯುಡಿಸಿ, ಬಿಸಿಎಂ, ಉಪ ನೋಂದಣಿ ಕಚೇರಿ ಸೇರಿ ಒಟ್ಟು 9 ಇಲಾಖೆಗಳು ಕಾರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಜೂನ್ ಮೊದಲ ವಾರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಹ ವರ್ಗವಣೆಯಾಗಲಿದೆ. ಆದರೆ ಈ ಭವನದಲ್ಲಿ ಯಾವ ಇಲಾಖೆ ಎಲ್ಲಿ ಇದೆ. ಎನ್ನುವ ಮಾಹಿತಿ ಜಿಲ್ಲಾಡಳಿತ ನೀಡದೆ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಪ್ರಸ್ತುತವಾಗಿ ಒಟ್ಟು 09 ಕಚೇರಿಗಳು ಕಾರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ವಿವಿಧ ಸಮಸ್ಯೆಗಳ ಕುರಿತು ನೀಡಲಾಗುತ್ತಿರುವ ಮನವಿಗಳ ಸಂಖ್ಯೆ ಕಡಿಮೆಯಾಗಿವೆ. ಕಾರಣ ತಿಳಿದಿಲ್ಲ. ಭವನದಲ್ಲಿ ಇಲಾಖೆಗಳ ಮಾಹಿತಿ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಿವನಂದ ಭಜಂತ್ರಿ ಎಡಿಸಿ ರಾಯಚೂರು