ಜಿಲ್ಲೆ

ಜಿಲ್ಲಾಡಳಿತದಿಂದ ನುಲಿಯ ಚಂದಯ್ಯ ಜನ್ಮ ದಿನಾಚರಣೆ

ಮಡಿಕೇರಿ: ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು ನುಲಿಯ ಚಂದಯ್ಯ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಕೊರಮ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಎಚ್.ಕೆ.ಕುಮಾರ್ ತಿಳಿಸಿದರು.


ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನುಲಿಯ ಚಂದಯ್ಯನ ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು. ಚಂದಯ್ಯ ಕಾಯಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇರಬೇಕು ಎಂಬುದನ್ನು ಬಯಸುತ್ತಿದ್ದರು. ಪ್ರತಿಯೊಬ್ಬರೂ ಕಾಯಕ ಮಾಡಿ ಬದುಕಬೇಕು. ೧೨ನೇ ಶತಮಾನದ ಪ್ರಮುಖ ಶರಣರಲ್ಲಿ ನುಲಿಯ ಚಂದಯ್ಯರವರು ತಮ್ಮ ಕಾಯಕ ಮತ್ತು ದಾಸೋಹದ ಮೂಲಕ ಪ್ರಸಿದ್ಧರಾದವರು ಎಂದರು.


ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕೂಡು ಮಂಗಳೂರು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಟಿ.ಜಿ.ಪೇಮ್‌ಕುಮಾರ್, ಸಮಾಜಕ್ಕೆ ಸಂದೇಶ ಸಾರಿದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನುಲಿಯ ಚಂದಯ್ಯ ಕೂಡ ಒಬ್ಬರು. ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲಿನ ವಚನಕಾರಾಗಿದ್ದರು. ವಿದ್ಯಾರ್ಥಿಗಳಿಗೆ ಪಾಠದ ಕಲಿಕೆಯೊಂದಿಗೆ ಇತಿಹಾಸದ ವ್ಯಕ್ತಿಗಳ ಪರಿಚಯದ ಪಾಠ ಅಗತ್ಯ ಎಂದರು.


ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕ ವೆಂಕಟನಾಯಕ್ ಮಾತನಾಡಿ, ವಚನ ಸಾಹಿತ್ಯದ ಅಮೂಲಾಗ್ರವಾದ ವಿಚಾರ, ವಿಷಯಗಳನ್ನು ತಿಳಿಯಬೇಕು. ಆ ಮೂಲಕ ಇಂದಿನ ಪೀಳಿಗೆಗೆ ವಚನಕಾರರ ವಿಚಾರಗಳ ಅಗತ್ಯತೆ ಇದೆ ಎಂದರು.


ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಯಿತು. ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಗಣ್ಯರು ವಿತರಿಸಿದರು.


ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಪ್ರಮುಖರಾದ ಗೋಪಾಲಕೃಷ್ಣ, ರಮ್ಯ, ಅನ್ಸಿಲಾ ರೇಬಾ, ಸರಸ್ವತಿ, ಉಷಾ, ಚಂದ್ರಮ್ಮ ಇತರರು ಇದ್ದರು.