ಚನ್ನರಾಯಪಟ್ಟಣ: ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ್ ತಿಳಿಸಿದರು.
ತಾಲೂಕಿನ ಪೇಟೆಬಿದಿ, ಗೂರನಹಳ್ಳಿ, ಚಾಕೇನಹಳ್ಳಿ, ಸೊಪ್ಪಿನಹಳ್ಳಿ, ವಳಂಬಿ, ಅಗ್ರಹಾರ ಗೆಟ್, ಹರಿಹರಪುರ, ಉದಯಪುರ, ಬಿಂಡೇನಹಳ್ಳಿ ಹೊನ್ನಶೆಟ್ಟಿಹಳ್ಳಿ, ದೊಡ್ಡ ಕುಂಚೆವು, ಬಿಂಡೇನಹಳ್ಳಿ ಗ್ರಾಮ ಸೇರಿದಂತೆ 17 ನಿರ್ಗತಿಕ ಕುಟುಂಬದ ಫಲಾನುಭವಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ರಾಜ್ಯಾದ್ಯಂತ 19000 ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ 1000 ರಿಂದ 5000 ರೂ. ವರೆಗೆ ಮಾಸಾಶನ ನೀಡಲಾಗುತ್ತದೆ. ಮಾಸಾಶನದೊಂದಿಗೆ ಪಾತ್ರೆ, ತಲೆ ದಿಂಬು, ಹೊಂದಿಕೆ ಸೇರಿದಂತೆ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ತಾಲೂಕಿನಲ್ಲಿ ನೂರಾರು ಅಶಕ್ತ, ಅನಾಥ, ಕಡು ಬಡವರು, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಾಸಾಶನ ಹಾಗೂ ವಾತ್ಸಲ್ಯಕ್ಕೆ ವಿತರಣೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಅಭ್ಯುದಯ ಆರ್ಥಿಕ ಸಬಲತೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಕೃಷಿ ಅಭಿವೃದ್ಧಿ, ಸಾಮಾಜಿಕ ಕ್ಷೇತ್ರ, ಜನರ ಜೀವನ ಮಟ್ಟ ಸುಧಾರಣೆ ಮಾಡುವುದರೊಂದಿಗೆ ಹಲವಾರು ಸಮಾಜಮುಖಿ ಚಿಂತನೆಗಳೊಂದಿಗೆ ಸರ್ವರ ಒಳಿತಿಗಾಗಿ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಚನ್ನರಾಯಪಟ್ಟಣದ ಯೋಜನಾಧಿಕಾರಿ ಕೆ.ಪ್ರಸಾದ್, ಜಿಲ್ಲಾ ಜನಜಾಗ್ರತಿ ಸದಸ್ಯರಾದ ಸಿ.ಎನ್.ಅಶೋಕ್, ಮನೋಹರ್, ಒಕ್ಕೂಟದ ಅಧ್ಯಕ್ಷೆ ನೇತ್ರಾವತಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೌಮ್ಯಾ, ಮೇಲ್ವಿಚಾರಕ ರಾಘವೇಂದ್ರ ಪೂಜಾರಿ, ಸೇವಾಪ್ರತಿನಿಧಿ ಶಿಲ್ಪಾ ಉಪಸ್ಥಿತರಿದ್ದರು.