ಅರಸೀಕೆರೆ ಗ್ರಾಮಾಂತರ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಮುದುಡಿ ಗ್ರಾಮದ ಎಂ.ಜಿ. ತಾಂಡ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರವೇ ವತಿಯಿಂದ ಬುಧವಾರ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಪೆನ್, ಪೆನ್ಸಿಲ್‌ಗಳನ್ನು ವಿತರಿಸಲಾಯಿತು.
ಕರವೇ ನಗರಾಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ನಾಡು ನುಡಿ, ನೆಲ-ಜಲಕ್ಕಾಗಿ ಹೋರಾಟ ನಡೆಸಿದ ನಾರಾಯಣಗೌಡರ ಹುಟ್ಟುಹಬ್ಬದಲ್ಲಿ ಸರ್ಕಾರಿ ಶಾಲೆಯಲ್ಲಿ ವಿಶೇಷವಾಗಿ ಮಕ್ಕಳಿಗೆ ನೋಟ್‌ಬುಕ್ ಪೆನ್, ಪೆನ್ಸಿಲ್‌ಗಳನ್ನು ವಿತರಿಸುವ ಮೂಲಕ ಆಚರಿಸುತ್ತಿದ್ದೇವೆ. ಇಂದು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ವೇದಿಕೆ ಕೆಲವು ಕಾರ್ಯಕ್ರಮಗಳನ್ನು ಈ ರೀತಿ ಹಮ್ಮಿಕೊಂಡು ಆಚರಿಸುತ್ತಿದ್ದೇವೆ ಎಂದರು.
ತಾಲೂಕಿನ ತಿರುಪತಿ ಹಳ್ಳಿಯೊಂದರಲ್ಲಿ ಜನಿಸಿ ರಾಜ್ಯದ ರಕ್ಷಣೆಗಾಗಿ ಲಕ್ಷಾಂತರ ಕಾರ್ಯಕರ್ತರ ಪಡೆಯನ್ನು ಕಟ್ಟಿ ಕನ್ನಡದ ಉಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ನೆಲ-ಜಲ, ಭಾಷೆ ಗಡಿ ವಿಚಾರವಾಗಿ ತೊಂದರೆಯಾದ ತಕ್ಷಣ ಹೋರಾಟಕ್ಕೆ ಕರೆ ಕೊಡುವ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುವ ಸಂಘ ಕರವೇ. ಇಂತಹ ಸಂಘವನ್ನು ಬೃಹತ್ತಾಗಿ ಕಟ್ಟಿ ಬೆಳೆಸಿರುವ ಶಕ್ತಿ ನಾರಾಯಣ ಗೌಡರದ್ದು. ಇವರು ನೂರು ಕಾಲ ಬಾಳಲಿ ಎಂದು ಹಾರೈಸಿದರು.
ತಾಲೂಕು ಕರವೇ ಅಧ್ಯಕ್ಷ ಹೇಮಂತ್‌ಕುಮಾರ್ ಮಾತನಾಡಿ, ಕನ್ನಡ ನಾಡು-ನುಡಿಗೆ ಸದಾ ಸ್ಪಂದನೆ ನೀಡುತ್ತಾ ಬಂದಿರುವ ಟಿ.ಎ. ನಾರಾಯಣಗೌಡ ಅವರು ಕನ್ನಡದ ಕಣ್ಮಣಿ ಎಂದು ಶ್ಲಾಘಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಎಲ್.ಮಂಜುನಾಥ್, ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ಸಂತೋಷ್, ಮುದುಡಿ ಗಂಗಾಧರ್, ಗ್ರಾಪಂ ಅಧ್ಯಕ್ಷ ರತನ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ನಂದಕುಮಾರ್, ಮಂಜುನಾಥ್, ಮಹಿಳಾಧ್ಯಕ್ಷೆ ಕಮಲಮ್ಮ, ಕಾರ್ಮಿಕ ಘಟಕದ ಮಂಜು, ರಾಘು, ಗಂಡಸಿ ಸಂಜೀವ, ಮಿಲ್ ಮಂಜು, ಅರ್ಜುನ್ ಗೌಡ, ಧನು, ನಂದನ್, ಉಮೇಶ್ ಉಪಸ್ಥಿತರಿದ್ದರು.