ಅಳವಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ರೈತರಿಗೆ ಮಾಹಿತಿ ನೀಡಿದರು. ಎಒ ಪ್ರತಾಪಗೌಡ, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ತಾರಾ, ಪ್ರಮುಖರಾದ ಶಂಕರಪ್ಪ ಮೇಟಿ, ಸಿದ್ದು ಇತರರಿದ್ದರು.. 
ಜಿಲ್ಲೆ

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ಅಳವಂಡಿ: ಕೃಷಿ ಇಲಾಖೆಯಿಂದ ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಹೇಳಿದರು.

ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಹಿತಿ ಅಭಿಯಾನದಲ್ಲಿ ಮಾತನಾಡಿದರು. ಕೃಷಿ ಇಲಾಖೆಯಿಂದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಗೆ ಶೇ.50, ಎಸ್‌ಸಿ-ಎಸ್ಟಿ ರೈತರಿಗೆ ಶೇ.75 ಸಹಾಯಧನದಲ್ಲಿ ಪ್ರಮಾಣಿತ ಬೀಜಗಳನ್ನು ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ ವಿತರಿಸಲಾಗುವುದು. ಕೃಷಿ ಯಾಂತ್ರಿಕರಣ ಯೋಜನೆಯಡಿ ಸಾಮಾನ್ಯ ರೈತರಿಗೆ ಶೇ.50, ಎಸ್‌ಸಿ ಎಸ್‌ಸ್ಟಿ ರೈತರಿಗೆ ಶೇ.90 ರಿಯಾಯತಿ ದರದಲ್ಲಿ ಕೃಷಿ ಯಂತ್ರಗಳನ್ನು ವಿತರಿಸಲಾಗುವುದು. ಕೇಂದ್ರ ಕಚೇರಿಯಿಂದ ಅನುಮೋದಿತ ಮಾದರಿಯಲ್ಲಿ ವಿತರಿಸಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಪ್ರಶಸ್ತಿ ಯೋಜನೆ, ಕೃಷಿ ಸಂಸ್ಕರಣ ಯೋಜನೆ, ಕೃಷಿಭಾಗ್ಯ ಯೋಜನೆ, ಮಣ್ಣು ಆರೋಗ್ಯ ಅಭಿಯಾನ ಸೇರಿ ಅನೇಕ ಯೋಜನೆಗಳಿದ್ದು, ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿರಿ ಎಂದರು.

ಆತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ತಾರಾ, ಪ್ರಮುಖರಾದ ಶಂಕರಪ್ಪ ಮೇಟಿ, ಸಿದ್ದು ಇತರರಿದ್ದರು.