ಬನ್ನೂರು: ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ಕೆ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಳೆದ 20 ದಿನಗಳಿಂದ ಆರಂಭವಾಗಿರುವ ಉತ್ತಮ ಮಳೆ ರೈತರಿಗೆ ಸಂತಸವನ್ನುಂಟು ಮಾಡಿದ್ದು, ಬಿತ್ತನೆ ಕಾರ್ಯದತ್ತ ಗಮನಹರಿಸಿದ್ದಾರೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಒದಗಿಸಿದ್ದೇ ಆದರೆ ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಸಕಾಲದಲ್ಲಿ ಇಲಾಖೆಯ ಸಹಕಾರದೊಂದಿಗೆ ಬಿತ್ತನೆ ಬೀಜವನ್ನು ವಿತರಿಸುತ್ತಿರುವುದಾಗಿ ತಿಳಿಸಿದರು.
ಜ್ಯೋತಿ, ಐ.ಆರ್.64, ಎಂಟಿಯು 1001 ತಳಿಯ ಭತ್ತವನ್ನು ವಿತರಣೆ ಮಾಡಲಾರಂಭಿಸಿದ್ದು, ರೈತರು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಉತ್ತಮ ಮಳೆಯಿಂದಾಗಿ ರಾಜ್ಯದ ಆಲಮಟ್ಟಿ, ನಾರಾಯಣಪುರ, ಲಿಂಗನಮಕ್ಕಿ, ಕೆಆರ್‌ಎಸ್ ಸೇರಿದಂತೆ ಬಹುತೇಕ ಅಣೆಕಟ್ಟುಗಳು ತುಂಬಿದ್ದು, ಈ ಬಾರಿ ವರ್ಷವಿಡೀ ನೀರು ದೊರೆಯುವ ವಿಶ್ವಾಸವಿದೆ. ಇದರಿಂದ ಕೃಷಿಯ ಜಿಡಿಪಿಯು ಹೆಚ್ಚಲಿದೆ ಎಂದರು.
ರೈತರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿತ್ತನೆ ಬೀಜ ಸೇರಿದಂತೆ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ. ಚಂದ್ರು, ವೈ.ಕೆ. ಬೋರೇಗೌಡ, ವೈ.ಜಿ. ಮಹೇಂದ್ರ, ವೈ.ಎಂ. ಮಲ್ಲೇಶ್, ವೈ.ಎಸ್. ಶಿವಕುಮಾರ್, ವೈ.ಎಸ್. ಶೇಖರ್, ಎನ್.ಎಸ್. ಶೇಖರ್, ವೈ.ಎಲ್. ಸಣ್ಣಮರೀಗೌಡ, ವೈ.ಎಸ್. ರಾಘವೇಂದ್ರ, ವೈ.ಕೆ. ಪುಟ್ಟಪ್ಪ, ನಂಜುಂಡೇಗೌಡ, ತಮ್ಮಯ್ಯ, ಸಿದ್ದೇಗೌಡ, ಕಾರ್ಯನಿರ್ವಹಣಾಧಿಕಾರಿ ವೈ.ಕೆ. ಕ್ಯಾತೇಗೌಡ, ಯೋಗೇಶ್ ಸೇರಿದಂತೆ ಗ್ರಾಮದ ಗ್ರಾಮಸ್ಥರು, ಮುಖಂಡರು ಇದ್ದರು.