ಜಿಲ್ಲೆ

ಕೊಳಗೇರಿ ನಿವಾಸಿಗಳಿಗೆ ಸ್ಮಾರ್ಟ್ ಮನೆಗಳ ಹಂಚಿಕೆ

ಹುಬ್ಬಳ್ಳಿ : ನಗರದ ಹೊಸೂರಿನ ವೀರ ಮಾರುತಿ ನಗರದ ಕೊಳೆಗೇರಿ ನಿವಾಸಿಗಳಿಗೆ ವಾಣಿವಿಲಾಸ ವೃತ್ತದ ಬಳಿಯ ಕಲ್ಲೂರು ಬಡಾವಣೆಯಲ್ಲಿ ಸ್ಮಾರ್ಟ್​ಸಿಟಿ ಯೋಜನೆ ಅಡಿ ನಿರ್ವಿುಸಿರುವ ವಸತಿ ಸಮುಚ್ಚಯದಲ್ಲಿ ಮನೆಗಳನ್ನು ಬುಧವಾರ ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು.

ನಾಲ್ಕು ಬ್ಲಾಕ್ ಗಳಲ್ಲಿ ಒಟ್ಟು 80 ಮನೆಗಳಿದ್ದು, ಅದರಲ್ಲಿ ಮೊದಲ ಹಂತದಲ್ಲಿ 39 ಮನೆಗಳನ್ನು ಹಂಚಿಕೆ ಮಾಡಲಾಯಿತು. 18 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ವಾಣಿವಿಲಾಸ ವೃತ್ತದಿಂದ ಬಿಆರ್​ಟಿಎಸ್ ಡಿಪೋವರೆಗೆ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಮನೆ ಕಳೆದುಕೊಳ್ಳುವವರಿಗೆ ಮನೆಗಳನ್ನು ಹಂಚಿಕೆ ಮಾಡಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸ್ಮಾರ್ಟ್​ಸಿಟಿ ಯೋಜನೆ ಅಡಿ ಮನೆಗಳನ್ನು ನಿಮಾಣ ಮಾಡಲಾಗಿದೆ. ಲಿಫ್ಟ್, ರ್ಪಾಂಗ್, ಓವರ್ ಹೆಡ್ ಟ್ಯಾಂಕ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳಿವೆ. ವಿವಿಧ ಕಾರಣಗಳಿಂದಾಗಿ ಮನೆ ಹಂಚಿಕೆ ವಿಳಂಬವಾಗಿತ್ತು. ಈಗ ಹಂಚಿಕೆ ಮಾಡಲಾಗಿದೆ ಎಂದರು.

ಮನೆಗಳಿಗಾಗಿ ಸಾಕಷ್ಟು ಜನ ಅರ್ಜಿ ಹಾಕಿದ್ದಾರೆ. ಎರಡನೇ ಹಂತದಲ್ಲಿ ಉಳಿದ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮನೆ ಪಡೆದವರು ಅವುಗಳನ್ನು ಬೇರೆಯವರಿಗೆ ಬಾಡಿಗೆ ನೀಡದೆ ನೀವೇ ವಾಸ ಮಾಡಬೇಕು ಎಂದು ಹೇಳಿದರು.

ಮನೆ ಪಡೆದವರು ಕೂಲಿ ಕೆಲಸ ಮಾಡುವರು. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ ಮನೆಗಳಿಗಾಗಿ ಫಲಾನುಭವಿಗಳು ಯಾರಿಗೂ ಹಣ ನೀಡಬಾರದು. ಈ ಮನೆಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ನಿವಾಸಿಗಳು ಸಂಘ ರಚಿಸಿಕೊಂಡು ಮನೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ವಸತಿ ಸಮುಚ್ಚಯದಲ್ಲಿ ಟ್ರಾನ್ಸ್​ಫಾರ್ಮರ್ ಅಳವಡಿಸಲಾಗಿದೆ. ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಫಲಾನುಭವಿಗಳೇ ಹಾಕಿಸಿಕೊಳ್ಳಬೇಕು. ಅದಕ್ಕೆ 10 ಸಾವಿರ ರೂ. ಖರ್ಚಾಗುತ್ತದೆ. ಅದನ್ನು ಫಲಾನುಭವಿಗಳೇ ಭರಿಸಬೇಕು ಎಂದರು.

ಮೂರ್ನಾಲ್ಕು ದಿನಗಳಲ್ಲಿ ಮನೆಗಳನನ್ನು ಸ್ವಚ್ಛಗೊಳಿಸಿ, ಒಡೆದ ಗಾಜು ಸರಿಪಡಿಸಲಾಗುವುದು. ಅ. 2 ಅಥವಾ 3ನೇ ದಿನಾಂಕದಂದು ಆ ಮನೆಗಳಿಗೆ ಸ್ಥಳಾಂತರವಾಗಬೇಕು. ಆ ನಂತರ ರಸ್ತೆ ಕಾಮಗಾರಿಗಾಗಿ ವಾಣಿವಿಲಾಸ ವೃತ್ತದಿಂದ ಬಿಆರ್​ಟಿಎಸ್ ಡಿಪೋವರೆಗೆ ಇರುವ ಫಲಾನುಭವುಗಳ ಮೂಲ ಮನೆಗಳನ್ನು ನೆಲಸಮ ಮಾಡಲಾಗುವುದು ಎಂದರು.

‘ನಾವು ಪ್ರತಿ ದಿನ ದುಡಿದು ಅದರಿಂದ ಬಂದ ಹಣದಲ್ಲಿ ಜೀವನ ನಡೆಸಬೇಕು. ವಿದ್ಯುತ್ ಮೀಟರ್ ಅಳವಡಿಕೆಗೆ 10 ಸಾವಿರ ರೂ. ಭರಿಸಲು ಸಾಧ್ಯವಾಗುವುದಿಲ್ಲ.ನೂತನ ಮನೆಗಳಿಗೆ ಸ್ಥಳಾಂತರವಾಗಲು ಅ.5 ರವರೆಗೆ ಕಾಲಾವಕಾಶ ನೀಡಬೇಕು’ ಎಂದು ಫಲಾನುಭವಿಗಳು ಮನವಿ ಮಾಡಿದರು.

ಬಿಜೆಪಿ ಮುಖಂಡ ರವಿ ನಾಯಕ, ಸಿದ್ದು ಮೊಗಲಿಶೆಟ್ಟರ, ಈಶ್ವರಗೌಡ ಪಾಟೀಲ, ಪಾಲಿಕೆಯ ಸಹಾಯಕ ಆಯುಕ್ತ ಆನಂದ ಕಾಂಬಳೆ ಹಾಗೂ ಇತರರು ಇದ್ದರು.