ಹಾರೋಹಳ್ಳಿ: ದಶಕಗಳಿಂದ ಬಾಕಿ ಉಳಿದಿದ್ದ ಬಡ ಜನರಿಗೆ ಆಶ್ರಯ ನಿವೇಶನಗಳ ಹಂಚಿಕೆಗೆ ವಿಶೇಷ ಕಾಳಜಿ ವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ತಾಲೂಕಿನ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕನಗರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಮನಗರ ತಾಲೂಕಿಗೆ 250 ಹಾಗೂ ಹಾರೋಹಳ್ಳಿಗೆ 70 ಎಕರೆ ಸರ್ಕಾರಿ ಗೋಮಾಳ ಜಮೀನು ಗುರುತಿಸಲಾಗಿದ್ದು, ಶ್ರೀದಲ್ಲೇ ಬಡವರಿಗೆ ನಿವೇಶನಗಳನ್ನು ಹಂಚುವ ಜತೆಗೆ ಹೆಚ್ಚಿನ ಭೂಮಿ ಗುರುತಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದರು.
ಹಾರೋಹಳ್ಳಿ ಮತ್ತು ಮರಳವಾಡಿ ಭಾಗದಲ್ಲಿ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದ ಗ್ರಾಮಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿಸಿ, ರಸ್ತೆ, ಸರ್ಕಾರಿ ಶಾಲೆಗಳ ದುರಸ್ತಿ, ಚರಂಡಿ, ಅಂಗನವಾಡಿ, ಕುಡಿಯುವ ನೀರಿನ ಸೌಲಭ್ಯ ಸೇರಿ ನೀರಾವರಿ ಅಭಿವೃದ್ಧಿಗೆ ಒತ್ತು ನೀಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಹಾಗೆಯೇ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ ಆದ್ಯತೆ ನೀಡಲಾಗಿದ್ದು, ಚೀಲೂರು ಮತ್ತು ಬನವಾಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆಗಳನ್ನು ನಿರ್ಮಿಸಿ ಗುಣಮಟ್ಟದ ಶಿಣ ಒದಗಿಸಲಾಗುವುದು ಎಂದರು.
ರೈತರ ಬಹುದಿನಗಳ ಕನಸಾದ ಭೈರಮಂಗಲ ಕೆರೆ ಪುನಶ್ಚೇತನ ಕಾರ್ಯಕ್ಕೆ ಹಂತಹಂತವಾಗಿ ಕ್ರಮವಹಿಸಲಾಗುವುದು ಎಂದರು.
ಎಇಇ ಚಂದ್ರಶೇಖರ್, ಪಿಡಿಒ ಸಿದ್ದಮುಗಿಲೇಗೌಡ, ಮುಖಂಡರಾದ ಬಾಲಾಜಿ, ದಿನೇಶ್, ರಾಜು, ನಂಜೇಗೌಡ, ರಾಜಣ್ಣ, ಮಹೇಶ್, ವಕೀಲ ವಿಜಯಣ್ಣ, ಆನಂದ, ಕೃಷ್ಣ, ಕವಿತಾ ಇತರರು ಇದ್ದರು.