ಮಂಡ್ಯ: ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಶಿಕ್ಷಣ ಪಡೆದ ಎಲ್ಲರಿಗೂ ಉದ್ಯೋಗ ದೊರಕುವುದು ಸುಲಭದ ಮಾತಲ್ಲ. ಆದರೆ ಶೈಕ್ಷಣಿಕ ಅವಧಿಯಲ್ಲಿ ಕೌಶಲತೆಯನ್ನು ವೃದ್ಧಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಶಾಸಕ ರವಿಕುಮಾರ್ ಗಣಿಗ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲು ಕಟ್ಟಡ) ಆವರಣದಲ್ಲಿ ಆಯೋಜಿಸಿದ್ದ ನಗರ ವ್ಯಾಪಿಯ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಶಾಲಾಬ್ಯಾಗ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಾಸಂಗ ಸಮಯದಲ್ಲಿಯೇ ಕೌಶಲತೆ ಬೆಳೆಸಿಕೊಳ್ಳಿ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಅವಕಾಶ ಒದಗಿಬರುತ್ತವೆ. ಅದೇ ರೀತಿ ಯಶಸ್ಸು ಕಂಡಾಗ ಇತರರಿಗೆ ನೆರವಾಗುವ ಬದ್ಧತೆ ತೋರಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾದಾನ ಎಲ್ಲ ದಾನಗಳಿಗೂ ಮಿಗಿಲಾದ ಪವಿತ್ರ ಕಾರ್ಯ ಎಂದು ನಮ್ಮ ಹಿರಿಯರು ಅರ್ಥೈಸಿದ್ದಾರೆ. ಆ ಮಾತಿನಂತೆ ಕಳೆದ 10 ವರ್ಷದಿಂದ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್‌ಬುಕ್ ವಿತರಿಸುತ್ತಿದ್ದೆ. ಅದನ್ನು ವಿಸ್ತರಿಸಿ ಪ್ರಸ್ತುತ ಶಾಲಾ ಬ್ಯಾಗ್ ವಿತರಿಸುವ ಕಾರ್ಯಹಮ್ಮಿಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಹೆಚ್ಚಾಗಿ ಶಿಕ್ಷಣ ಪಡೆಯುವ ಸರ್ಕಾರಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳನ್ನು ಸಬಲರಾಗಿಸಿ ಶಿಕ್ಷಣವಂತರನ್ನಾಗಿ ಮಾಡುವ ಸದುದ್ದೇಶದಿಂದ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹಿಸುವ ಶಾಸಕರ ಕಾರ್ಯ ಇತರರಿಗೆ ಮಾದರಿ. ಜನಪರ ಕಾಳಜಿ, ಅಭಿವೃದ್ಧಿಯ ಮುನ್ನೋಟದಿಂದ ಹಲವು ಯೋಜನೆಗಳನ್ನು ಸಾಕಾರಗೊಳಿಸಿ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರ ಇಚ್ಚಾಶಕ್ತಿ ಅಪರಿಮಿತ. ಮಂಡ್ಯ ತಾಲೂಕಿನಲ್ಲಿ ಮೂರ‌್ನಾಲ್ಕು ಸಾವಿರ ಮಕ್ಕಳು ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಹಂತ ಹಂತವಾಗಿ ಎಲ್ಲರಿಗೂ ಬ್ಯಾಗ್ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಮುಡಾ ಅಧ್ಯಕ್ಷ ನಯೀಂ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರುದ್ರಪ್ಪ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ತಮ್ಮೇಗೌಡ, ನಗರಸಭಾ ಸದಸ್ಯರಾದ ಶ್ರೀಧರ್, ಗೀತಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹೇಶ್, ಮುಖಂಡರಾದ ಬಿ.ಶಿವನಂಜು, ನಾಗರತ್ನ, ಅಭಿಲಾಷ್, ಶ್ರೀಕಾಂತ್, ಆದರ್ಶ ಇತರರಿದ್ದರು. ಇದೇ ಸಂದರ್ಭದಲ್ಲಿ ಮಂಡ್ಯ ನಗರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಸುಮಾರು 1 ಸಾವಿರ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.