ಜಿಲ್ಲೆ

ವೃಕ್ಷ-ರಕ್ಷಾ ಕಾರ್ಯಕ್ರಮ ದಡಿ ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಅವಿನಾಶ್ ಜೈನಹಳ್ಳಿ

ಮೈಸೂರು: ಜಿಎಸ್‌ಎಸ್ ಯೋಗ ಸಂಸ್ಥೆ ವತಿಯಿಂದ ನಂಜನಗೂಡಿನಲ್ಲಿ ಇರುವ ವಿಸ್ಡಮ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವೃಕ್ಷ-ರಕ್ಷಾ ಕಾರ್ಯಕ್ರಮ ದಡಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.

ಜಿಎಸ್‌ಎಸ್ ಯೋಗ ಕೇಂದ್ರದ ಸ್ಥಾಪಕ ಯೋಗಾತ್ಮ ಶ್ರೀಹರಿ ಮಾತನಾಡಿ, ಕಳೆದ ಮೂರು ದಶಕಗಳಿಗೆ ಹೋಲಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ ಪರಿಸರ ತುಂಬಾ ಹದಗೆಟ್ಟಿದೆ. ಪರಿಸರ ಅಳಿವು - ಉಳಿವಿನ ಪ್ರಶ್ನೆ ಈಗ ಎದುರಾಗಿದೆ.

ಅನೇಕ ಪ್ರಾಣಿ, ಪಕ್ಷಿಗಳು, ಜೀವ ವೈವಿಧ್ಯಗಳು ಅಳಿವಿನಂಚಿಗೆ ಬಂದಿದೆ. ಪರಿಸರವನ್ನು ಹಾಳು ಮಾಡುತ್ತಿರುವ ಏಕೈಕ ಪ್ರಾಣಿ ಎಂದರೆ ಅದು ಮನುಷ್ಯ ಮಾತ್ರ. ತಂತ್ರಜ್ಞಾನದ ಹಿಂದೆ ಓಡುತ್ತಿರುವ ಮಾನವನಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವಿಲ್ಲದೆ ಇರುವುದು ದುರದೃಷ್ಟಕರ. ಇನ್ನು ಮುಂದಾದರೂ ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಎಸ್‌ಎಸ್ ಸಂಸ್ಥೆಯ ಟೀಮ್ ಹೆಡ್ ಜಿ.ಬಿ.ರೂಪಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವನ ಹಸ್ತಕ್ಷೇಪದಿಂದ ಪರಿಸರ ಮಾಲೀನ್ಯವಾಗುತ್ತಿದೆ. ಮರ ಕಡಿಯುವುದು, ಕಲುಷಿತ ನೀರನ್ನು ನದಿಗಳಿಗೆ ಬಿಡುವುದು, ಪ್ಲಾಸ್ಟಿಕ್ ಬಳಕೆ, ಮಿತಿ ಮೀರಿದ ವಾಹನ ಬಳಕೆಯಿಂದ ವಾತಾವರಣ ಕಲುಷಿತ ಗೊಂಡಿದೆ. ಈ ನಿಟ್ಟಿನಲ್ಲಿ ಗಿಡ-ಮರ ಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಯಾರಿಗಾದರೂ ಉಡುಗೊರೆ ನೀಡುವ ಸಂದರ್ಭ ಬಂದರೆ ಸಸಿಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ತಿಳಿಸಿದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಜಿಎಸ್‌ಎಸ್ ಯೋಗ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಸಿಗಳನ್ನು ನೀಡಲಾಗುತ್ತಿದೆ. ಅವರು ತಮ್ಮ ಮನೆ, ಆವರಣದ ಪಕ್ಕದಲ್ಲಿ ಅವುಗಳನ್ನು ಬೆಳೆಸಿ, ಪೋಷಣೆ ಮಾಡಬೇಕು. ಜತೆಗೆ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಗಿಡ, ಮರ ಸಂರಕ್ಷಣೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ವಿಸ್ಡಮ್ ಶಾಲೆಯ ಸ್ಥಾಪಕ ಮಂಜುನಾಥ್, ಸಂಸ್ಥೆಯ ಅಧ್ಯಕ್ಷ ಮಂಗಳಾ ಸೋಮಶೇಖರ್, ಪ್ರಾಂಶುಪಾಲರಾದ ಅಮೃತ ಮೂರ್ತಿ ಇತರರು ಇದ್ದರು.