ಜಿಲ್ಲೆ

ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಣೆ

ಹಾನಗಲ್ಲ: ಪುರಸಭೆ ಸಾಮಾನ್ಯ ನಿಧಿಯಡಿ 31 ಪೌರಕಾರ್ಮಿಕರು, 14 ನೀರು ಸರಬರಾಜು ಸಿಬ್ಬಂದಿ ಹಾಗೂ 9 ಸ್ವಚ್ಛತಾ ವಾಹನಗಳ ಚಾಲಕರಿಗೆ ಮಳೆಗಾಲದ ಸುರಕ್ಷತಾ ಪರಿಕರಗಳನ್ನು ಶಾಸಕ ಶ್ರೀನಿವಾಸ ಮಾನೆ ವಿತರಿಸಿದರು.

ಪರಿಕರ ವಿತರಿಸಿ ಮಾತನಾಡಿದ ಶಾಸಕ ಮಾನೆ, ಪ್ರತಿದಿನ ಮಳೆ, ಗಾಳಿ, ಚಳಿ ಲೆಕ್ಕಿಸದೆ ಪೌರಕಾರ್ಮಿಕರು ನಗರದ ಸ್ವಚ್ಛತೆ, ನೈರ್ಮಲ್ಯ ಕಾರ್ಯದಲ್ಲಿ ತೊಡಗಿದ್ದಾರೆ. ಇವರೆಲ್ಲರ ಸುರಕ್ಷತೆಯ ದೃಷ್ಟಿಯಿಂದ ಸಲಕರಣೆ ವಿತರಿಸಲಾಗುತ್ತಿದೆ. ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರು ಹೆಚ್ಚು ಶ್ರಮವಹಿಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು. ಈಗಾಗಲೇ ಪುರಸಭೆಯಿಂದ ತ್ಯಾಜ್ಯ ವಿಲೇವಾರಿ ಘಟಕದ ಸಾಮರ್ಥ್ಯ ಹೆಚ್ಚಿಸಲಾಗಿದ್ದು, ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ. ಇದರಿಂದ ಪುರಸಭೆಯ ಆದಾಯ ಹೆಚ್ಚಾಗಲಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷರಾದ ಖುರ್ಷಿದ್‌ಅಹ್ಮದ ಹುಲ್ಲತ್ತಿ, ನಾಗಪ್ಪ ಸವದತ್ತಿ, ಸದಸ್ಯರಾದ ಪರಶುರಾಮ ಖಂಡೂನವರ, ವಿರೂಪಾಕ್ಷಪ್ಪ ಕಡಬಗೇರಿ, ಮಮತಾ ಆರೆಗೊಪ್ಪ, ಮೇಕಾಜಿ ಕಲಾಲ, ಎಂ.ಎಂ. ಬಡಗಿ, ವಿನಯ ಬಂಕನಾಳ, ಗುರುರಾಜ ನಿಂಗೋಜಿ, ಉಮೇಶ ಮಾಳಗಿ, ರೇಣುಕಾ ಸಾತಪತಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಇಂಜಿನಿಯರ್ ನಾಗರಾಜ ಮಿರ್ಜಿ, ಕಚೇರಿ ವ್ಯವಸ್ಥಾಪಕಿ ಎನ್.ಎಸ್. ನಾಗನೂರ, ಜಿ.ಟಿ. ಪೂಜಾರ ಇತರರು ಉಪಸ್ಥಿತರಿದ್ದರು.