ಜಿಲ್ಲೆ

ಸಹಕಾರಿ ಬ್ಯಾಂಕಿಂಗ್​ ಕ್ಷೇತ್ರದಿಂದ ಸಮಾಜದ ಅಭಿವೃದ್ಧಿ

ಉಡುಪಿ: ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನೆರವಾಗುವ ಮೂಲಕ ಬದುಕನ್ನು ಹಸನುಗೊಳಿಸುವ ಕಾರ್ಯ ಅಭಿನಂದನೀಯ. ಸಹಕಾರಿ ರಂಗದ ಬ್ಯಾಂಕ್​ ವ್ಯವಸ್ಥೆ ಸದೃಢವಾದರೆ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದು ವಿಧಾನಪರಿಷತ್​ ಸದಸ್ಯ ಕಿಶೋರ್​ ಕುಮಾರ್​ ಪುತ್ತೂರು ಹೇಳಿದರು.

ಪುರಭವನದಲ್ಲಿ ಮಹಾಲಕ್ಷ್ಮಿ ಕೋ&ಆಪರೇಟಿವ್​ ಬ್ಯಾಂಕ್​ ವತಿಯಿಂದ ಜಿಲ್ಲೆಯ ಎಸ್​.ಎಸ್​.ಎಲ್​.ಸಿ., ಪಿ.ಯು.ಸಿ., ಪದವಿ ಹಾಗೂ ಸ್ನಾತಕೋತ್ತರ ವಿಭಾಗದ 1,500 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 25 ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ, 2025ನೇ ಸಾಲಿನ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಹಾಲಕ್ಷ್ಮಿ  ಬ್ಯಾಂಕ್​ 9 ಜಿಲ್ಲೆಗಳಲ್ಲಿ ಸೇವೆಯ ಮೂಲಕ ಸಹಕಾರ ಕ್ಷೇತ್ರದಲ್ಲಿ ಉನ್ನತಸ್ಥಾನ ಗಳಿಸಿದೆ. ಉಪಕಾರ ಮಾಡಿದವರನ್ನು ಜೀವನದಲ್ಲಿ ಯಾವತ್ತೂ ಮರೆಯಬಾರದು. ಸಮಯ ಬಂದಾಗ ಪ್ರತ್ಯುಪಕಾರ ಮಾಡುವುದು ಮಾನವೀಯ ಧರ್ಮ ಎಂದರು.

ಅಜೆಕಾರು ಪದ್ಮ ಗೋಪಾಲ ಎಜ್ಯುಕೇಶನ್​ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಉದ್ಘಾಟಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉಪಕಾರ ಮಾಡುವವರು ಸಮಾಜದ ಆಸ್ತಿ. ವಿದ್ಯಾರ್ಥಿ ದೆಸೆಯಲ್ಲಿ ಅನ್ಯಕಾರ್ಯಗಳತ್ತ ಗಮನ ಹರಿಸದೆ ಶಿಕ್ಷಣ, ಜ್ಞಾನ, ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹುಟ್ಟಿದ ಊರಿಗೆ ಕೀರ್ತಿ ತರಬೇಕು. ಗಳಿಕೆಯ ಒಂದಂಶವನ್ನು ಸಮಾಜಕ್ಕೆ ವಾಪಾಸು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸತ ಖಂಬದಕೋಣೆ ರೈತರ ಸೇವಾ ಸಂಘದ ಅಧ್ಯಕ್ಷ ಎಸ್​. ಪ್ರಕಾಶ್ಚಂದ್ರ ಶೆಟ್ಟಿ, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್​, ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯ ಹಟ್ಟಿಯಂಗಡಿ ಆವರನ್ನು ಸನ್ಮಾನಿಸಲಾಯಿತು.

ಗೀತಾನಂದ ಫೌಂಡೇಶನ್​ ಕೋಟ ಪ್ರವರ್ತಕ ಆನಂದ ಸಿ. ಕುಂದರ್​ ಪ್ರತಿಭಾ ಪುರಸ್ಕಾರ ವಿತರಿಸಿದರು. ಜಿ. ಶಂಕರ್​ ಫ್ಯಾಮಿಲಿ ಟ್ರಸ್ಟಿನ ನಿರ್ದೇಶಕಿ ಶ್ಯಾಮಿಲಿ ನವೀನ್​ ಬ್ಯಾಂಕಿನ 2025ನೇ ಸಾಲಿನ ಡೈರಿ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್​, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಉದ್ಯಮಿ ಆನಂದ ಪಿ. ಸುವರ್ಣ, ಉಜ್ವಲ್​ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಅಜಯ್​ ಪಿ. ಶೆಟ್ಟಿ, ಉಪಸ್ಥಿತರಿದ್ದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.