ಹೊನ್ನಾಳಿ: ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.
ತಾಲೂಕಿನ ನೇರಲಗುಂಡಿ, ಬೇವಿನಹಳ್ಳಿ, ಹನುಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ವಿತರಿಸಿ ಅವರು ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಬೇಕಾಬಿಟ್ಟಿ ಉಚಿತ ಭರವಸೆ ಕೊಟ್ಟು ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಆದರೆ, ಈಗ ಕೊಟ್ಟ ಭರವಸೆ ೀಡೇರಿಸದೆ ಕಾಗಕ್ಕ ಗುಬಕ್ಕನ ಕತೆ ಹೇಳಲು ಶುರುಮಾಡಿದ್ದಾರೆ ಎಂದರು.
ಆರ್ಥಿಕ ಇಲಾಖೆ ಈ ವರ್ಷಕ್ಕೆ ಮಾತ್ರ ಹಣ ಇಟ್ಟಿದ್ದು, ಮುಂದಿನ ವರ್ಷದಿಂದ ಐದು ಗ್ಯಾರಂಟಿಗಳಿಗೆ ಹಣ ಇಲ್ಲ ಎಂದಿದೆ. ಒಂದು ವೇಳೆ ಮುಂದಿನ ವರ್ಷವೂ ಐದು ಗ್ಯಾಂರಂಟಿಗಳಿಗೆ ಹಣ ಇಟ್ಟರೆ ಆರ್ಥಿಕ ಸ್ಥಿತಿ ದಿವಾಳಿಯಾಗಲಿದೆ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ ಎಂದರು.
ಅಧಿಕಾರಕ್ಕೆ ಬರುವ ಮೊದಲು ದಿನಬಳಕೆ ವಸ್ತುಗಳು ಗಗನಕ್ಕೇರಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಆದರೆ, ಈಗ ಅವರೇ ಅಧಿಕಾರಕ್ಕೆ ಬಂದು ಪ್ರತಿಯೊಂದರ ದರ ಹೆಚ್ಚಿಸಿದ್ದಾರೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲವೊನ್ನೆ ಮಂಜುನಾಥ್, ಕುಂದೂರು ಅನಿಲ್, ಹನುಮಂತಪ್ಪ, ರುದ್ರೇಶಪ್ಪ ಮತ್ತಿತರರಿದ್ದರು.