ಗಂಡಸಿ: ಹೆರಿಗೆ ಸುಸೂತ್ರವಾಗಿ ನಡೆದು ಆರೋಗ್ಯವಂತ ಮಗುವಿಗೆ ಜನ್ಮ ನೀಡಬೇಕೆಂಬ ಬಯಕೆ ಗರ್ಭಿಣಿಯದ್ದು ಎಂದು ಬೆಂಗಳೂರು ಪೂರ್ವ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ. ಬಿ.ರಘುನಾಥ್ ತಿಳಿಸಿದರು.
ಹೋಬಳಿಯ ಬಾಗಿವಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಪ್ರತಿ ಗರ್ಭಿಣಿಗೆ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಅಂಗನವಾಡಿಗಳ ಮೂಲಕ ಉಚಿತವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು, ಮಹಿಳೆ ತನ್ನ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದಾಗಿದೆ ಎಂದರು.
ಇದೇ ವೇಳೆ 32 ಗರ್ಭಿಣಿಯರಿಗೆ ಡಾ.ಕೃತಿ ನೇತೃತ್ವದಲ್ಲಿ ಸೀಮಂತ ನೆರವೇರಿಸಲಾಯಿತು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಶಿವಶಂಕರ್, ಬಾಗಿವಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃತಿ, ಡಾ. ಮಂಜುನಾಥ್, ಚನ್ನರಾಯಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ವಿಜಯಶಂಕರ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಭರತ್, ಬಾಗಿವಾಳು ಗ್ರಾಪಂ ಅಧ್ಯಕ್ಷ ಪವಿತ್ರಾ, ಪಿಡಿಒ ಭರತ್ ಇತರರಿದ್ದರು.
.