ಜಗಳೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಮಾಡಲು ಸರ್ಕಾರ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆ ಮಾಡುತ್ತಿದೆ ಎಂದು ಕರುನಾಡ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಜೆ. ಮಹಾಲಿಂಗಪ್ಪ ಹೇಳಿದರು.
ತಾಲೂಕಿನ ಹಿರೇಮಲ್ಲನಹೊಳೆ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಹಮ್ಮಿಕೊಂಡಿದ್ದ ಮಧ್ಯಾಹ್ನದ ಉಪಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಉಂಟಾಗುತ್ತಿರುವ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮೊದಲು 1ರಿಂದ 8ನೇ ತರಗತಿವರೆಗೂ ವಾರಕ್ಕೆ ಒಂದು ಬಾರಿ ಮೊಟ್ಟೆ ವಿತರಣೆ ಮಾಡುತ್ತಿತ್ತು. ಅದರೆ, ಈ ವರ್ಷದಿಂದ 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲು ಸೂಚನೆ ಮಾಡಿದ್ದು ಉತ್ತಮ ಬೆಳೆವಣಿಗೆ ಎಂದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಪ್ರಕಾಶ್, ಶಿಕ್ಷಕ ಪ್ರಶಾಂತ್ ಸ್ವಾಮಿ, ದೈಹಿಕ ಶಿಕ್ಷಕ ಮಂಜುನಾಥ, ಅತಿಥಿ ಶಿಕ್ಷಕ ಮಹೇಶ್, ಎಸ್‌ಡಿಎಂಸಿ ಸದಸ್ಯರಾದ ಜಿ.ಟಿ. ಕುಮಾರಸ್ವಾಮಿ, ಶೇಖರಪ್ಪ, ಚಂದ್ರಪ್ಪ, ಬಸಮ್ಮ, ತಿಪ್ಪೇಸ್ವಾಮಿ ಮತ್ತಿತರರಿದ್ದರು.