ಅರಸೀಕೆರೆ ನಗರದ ಸರಸ್ವತಿಪುರಂ ಬಡಾವಣೆಯ ಕುಟುಂಬ ಸದಸ್ಯರಿಗೆ ಔಷಧ ಕಿಟ್ ವಿತರಿಸಲಾಯಿತು. ಡಾ.ರಜತ್, ಕಿರಣ್‌ಕುಮಾರ್, ರಮೇಶ್, ಉಮೇಶ್ ಇದ್ದರು. 
ಜಿಲ್ಲೆ

ಅನಾರೋಗ್ಯ ಪೀಡಿತರಿಗೆ ಔಷಧ ಕಿಟ್ ವಿತರಣೆ

ಅರಸೀಕೆರೆ: ಅಶಕ್ತರಿಗೆ ನೆರವು ನೀಡುವ ಸೇವಾ ಮನೋಭಾವ ಪ್ರಶಂಸನೀಯ ಎಂದು ವೈದ್ಯ ಡಾ.ರಜತ್ ಹೇಳಿದರು.

31ನೇ ವಾರ್ಡ್‌ನ ನಗರಸಭೆ ಸದಸ್ಯೆ ಸುಜಾತಾ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಸೋಮವಾರ ಸರಸ್ವತಿಪುರಂ ಹಾಗೂ ಕಂತೇನಹಳ್ಳಿ ಬಡಾವಣೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಕುಟುಂಬ ಸದಸ್ಯರಿಗೆ ಔಷಧ ಕಿಟ್ ವಿತರಿಸಿ ಮಾತನಾಡಿದರು.

ನಾಲ್ಕು ವರ್ಷದಿಂದ ಮಾರುತಿನಗರದ ಎರಡು ಬಡಾವಣೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬವನ್ನು ಸಂಪರ್ಕಿಸಿ ನೆರವು ನೀಡಲಾಗಿದೆ. ಇದೀಗ ಕಂತೇನಹಳ್ಳಿ, ಸರಸ್ವತಿಪುರಂ, ಹೆಂಜಗೊಂಡನಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳ ಬಡವರಿಗೆ ಸೇವೆ ವಿಸ್ತರಿಸಲು ಮುಂದಾಗಿರುವುದು ಔಚಿತ್ಯಪೂರ್ಣವಾಗಿದೆ. ಆರೋಗ್ಯ ಕಾಳಜಿ ಜತೆಗೆ ಮೃತಪಟ್ಟ ಬಡ ಕುಟುಂಬಕ್ಕೆ ಅಂತ್ಯಕ್ರಿಯೆ ನೆರವೇರಿಸಲು ಐದು ಸಾವಿರ ರೂ. ನೀಡಲು ತೀರ್ಮಾನ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಕರವೇ ತಾಲೂಕು ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ಸಮಾಜಮುಖಿ ಸೇವೆಗೆ ಮುಂದಾಗಿರುವ ಸುಜಾತಾ ರಮೇಶ್ ಬಳಗ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸಿದರು.

ಬಳಗದ ಮುಖಂಡರಾದ ರಮೇಶ್, ಉಮೇಶ್‌ನಾಯಕ್, ಸರಸ್ವತಿಪುರಂ ಮಂಜು ಇದ್ದರು.