ಹುಣಸೂರು: ನಗರದ ಕಲ್ಕುಣಿಕೆ ಮತ್ತು ರಂಗನಾಥ ಬಡಾವಣೆಯ ಸರ್ಕಾರಿ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಗಂಧ ಫೌಂಡೇಶನ್ ವತಿಯಿಂದ ನೋಟ್‌ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ರಂಗನಾಥ ಬಡಾವಣೆಯ ಶಾಲಾ ಆವರಣದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಪತಂಗೆ, ಸರ್ಕಾರಿ ಶಾಲೆಗಳ ಸಬಲೀಕರಣದ ಉದ್ದೇಶವನ್ನಿಟ್ಟುಕೊಂಡು ಫೌಂಡೇಶನ್ ಕಳೆದ 7-8 ವರ್ಷಗಳಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಜಾಮೆಟ್ರಿ, ಪೆನ್, ಪೆನ್ಸಿಲ್ ಮುಂತಾದವುಗಳನ್ನು ವಿತರಿಸುತ್ತಿದೆ. ಮಾತ್ರವಲ್ಲದೇ ರಾಜ್ಯದ ದಾವಣಗೆರೆ, ಹರಿಹರ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ ಎಂದರು.
ಸರ್ಕಾರಿ ಶಾಲೆಗಳ ಸಬಲೀಕರಣದಿಂದ ಮಾತ್ರ ಸಮಾಜದ ಎಲ್ಲ ಸಮುದಾಯದ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ದಾಖಲಾತಿ ಕುಂಠಿತಗೊಂಡು ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ದುರಂತಕ್ಕೆ ನಾಂದಿಯಾಗಲಿದೆ. ಈ ನಿಟ್ಟಿನಲ್ಲಿ ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಸರ್ಕಾರಿ ಶಾಲೆಯ ಶಿಕ್ಷಕರ ಮೂಲಕ ಸದೃಢ ಸಮಾಜ ನಿರ್ಮಿಸುವ ಅಗತ್ಯವಿದೆ ಎಂದರು.
ಸಿಆರ್‌ಪಿ ಎಸ್.ಆರ್.ಪ್ರಶಾಂತ್ ಮಾತನಾಡಿ, ಶ್ರೀಗಂಧ ಫೌಂಡೇಶನ್‌ನೊಂದಿಗೆ ಮೈಸೂರಿನ ಪ್ರೇರಣಾ ಮೋಟಾರ್ಸ್‌ನ ಅಧಿಕಾರಿಗಳೂ ಈ ಸೇವೆಯಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರೇತರ ಸಂಘಸಂಸ್ಥೆಗಳು ಸಹಕಾರ ನೀಡುತ್ತಿರುವುದು ಅಭಿನಂದನೀಯ ಎಂದರು.
ಫೌಂಡೇಶನ್‌ನ ಸದಸ್ಯರಾದ ರಶ್ಮಿ ಪತಂಗೆ, ಎನ್.ಅಶ್ವಿನ್, ವೆಂಕಟರಮಣ, ಭಾರ್ಗವಿ, ಪ್ರೇರಣಾ ಮೋಟಾರ್ಸ್‌ನ ರಾಜೀವ್, ಗಿರಿಜಾ, ಶಿಕ್ಷಣ ಇಲಾಖೆಯ ಇಸಿಒ ಕುಮಾರಸ್ವಾಮಿ, ಮುಖ್ಯಶಿಕ್ಷಕರಾದ ಲಕ್ಷ್ಮೀನರಸಮ್ಮ, ಕಾಂತಮ್ಮ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.