ಯಳಂದೂರಿನಲ್ಲಿ ನೋಂದಾಯಿತ ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಿಟ್‌ಗಳನ್ನು ಜಿ.ಬಿ. ವೀಣಾ ವಿತರಿಸಿದರು. ಡಾ.ಪಂಪಾಶ್ರೀ, ಶಂಕರ್ ಇದ್ದರು.  
ಜಿಲ್ಲೆ

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ

ಅಭಿನಯ್ ಎಚ್.ಎಂ

ಯಳಂದೂರು: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಿಟ್‌ಗಳನ್ನು ಬುಧವಾರ ವಿತರಿಸಲಾಯಿತು.

ಆಯುರ್ವೇದ ವೈದ್ಯ ಡಾ.ಪಂಪಾಶ್ರೀ ಶಂಕರ್ ಮಾತನಾಡಿ, ಸರ್ಕಾರದಿಂದ ನೋಂದಾಯಿತ ಕಾರ್ಮಿಕರಿಗೆ ಪೌಷ್ಟಿಕ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದು ಸಂಪೂರ್ಣ ಆಯುರ್ವೇದ ನ್ಯೂಟ್ರಿಷಿಯನ್ ಕಿಟ್ ಆಗಿದ್ದು, ಇದರಲ್ಲಿ 500 ಗ್ರಾಂ ಚ್ಯವನಪ್ರಾಶ, ಕ್ರಿಮಿಕುಠಾರ ರಸದ 30 ಮಾತ್ರೆ, 500 ಮಿಲಿಯ ಮಹಾನಾರಾಯಣ ತೈಲ, ಆರೋಗ್ಯವರ್ಧಿನಿ ವಟಿಯ 90 ಮಾತ್ರೆ, 150 ಗ್ರಾಂ ಶತಾವರಿ ಚೂರ್ಣ ಒಳಗೊಂಡಿದೆ. ಈ ಕಿಟ್‌ನ್ನು 30 ದಿನಗಳ ಉಪಯೋಗಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವ, ರೋಗನಿರೋಧಕ ಶಕ್ತಿ ವೃದ್ಧಿಸುವ, ಚರ್ಮದ ಕಾಯಿಲೆಗಳನ್ನು ತಡೆಗಟ್ಟುವ, ಜಂತು ಹುಳುಗಳ ಬಾಧೆಯಿಂದ ಉಂಟಾಗುವ ಅಪೌಷ್ಟಿಕತೆಯನ್ನು ಪರಿಹರಿಸುವ ಮಾತ್ರೆ, ಕೀಲುಗಳ ನೋವು ನಿವಾರಿಸುವ ತೈಲವಿದ್ದು, ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದರು.

ಒಂದು ತಿಂಗಳಿಗೆ ಸಾಕಾಗುವಷ್ಟು ಔಷಧ ಕಿಟ್‌ನಲ್ಲಿದ್ದು, ಅವಶ್ಯಕತೆ ಇದ್ದಲ್ಲಿ ಮತ್ತೆ ವೈದ್ಯರ ಸಲಹೆ ಪಡೆದು ಮುಂದುವರಿಯಬಹುದು. ಹಾಗಾಗಿ ಎಲ್ಲರೂ ಇದನ್ನು ಬಳಸಿ ಆರೋಗ್ಯವಂತರಾಗಿರಬೇಕು ಎಂದು ಸಲಹೆ ನೀಡಿದರು.

ಹಿರಿಯ ಕಾರ್ಮಿಕ ನಿರೀಕ್ಷಕಿ ಜಿ.ಬಿ.ವೀಣಾ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಕಿಟ್‌ಗಳ ವಿತರಣೆ ಆರಂಭಗೊಂಡಿದ್ದು, ತಾಲೂಕಿನಲ್ಲಿ ಒಟ್ಟು 750 ನೋಂದಾಯಿತ ಸದಸ್ಯರಿದ್ದಾರೆ. ಒಂದೇ ದಿನ 529 ಜನರಿಗೆ ಕಿಟ್ ವಿತರಣೆ ಮಾಡಲಾಗಿದ ಎಂದರು.

ಸಿಬ್ಬಂದಿ ನಾಗರತ್ನಾ, ಪ್ರದೀಪ್‌ಕುಮಾರ್, ಕಟ್ಟಡ ಕಾರ್ಮಿಕರಾದ ನಾಗರಾಜು, ಮಹದೇವ ಇತರರು ಇದ್ದರು.