ಜಿಲ್ಲೆ

ರಿಕ್ಷಾ ಸ್ಟ್ಯಾಂಡ್ ಸುತ್ತ ಮರ ಬೆಳೆಸಿದ ಚಾಲಕರು: ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಮೆಚ್ಚುಗೆ

ಸೌಮ್ಯ ಆರ್

ಸುಳ್ಯ: ಇಲ್ಲಿನ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿ ಸುಂದರ ನೆರಳಿನ ಮರಗಳನ್ನು ಬೆಳೆಸಿದ ಭಗತ್ ಸಿಂಗ್ ಅಟೋ ಸ್ಟಾಂಡ್‌ನ ರಿಕ್ಷಾ ಚಾಲಕರಿಗೆ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಮೆಚ್ಚುಗೆ ಸೂಚಿಸಿ ಫಾರೆಸ್ಟ್ ಕ್ರಿಯೇಟರ್ಸ್ ಆಫ್ ಇಂಡಿಯಾ ವತಿಯಿಂದ ಪ್ರಮಾಣ ಪತ್ರ ಹಾಗೂ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ವಿಶ್ವ ಭೂಮಿ ದಿನದ ಅಂಗವಾಗಿ ಶುಭಕೋರಿ, ಸಾಮಾನ್ಯವಾಗಿ ಶೀಟ್ ಹಾಕಿ ಶೆಡ್ ನಿರ್ಮಿಸಿ ರಿಕ್ಷಾ ನಿಲ್ದಾಣ ಮಾಡುತ್ತಾರೆ. ಆದರೆ ಇಲ್ಲಿ ಮರ ಬೆಳೆಸಿ ಪೋಷಿಸಿರುವುದು ಶ್ಲಾಘನೀಯ. ಕಡು ಬೇಸಿಗೆಯಲ್ಲಿ ನೆರಳನ್ನೂ, ತಂಪಾದ ಗಾಳಿಯನ್ನೂ ನೀಡುವ ಈ ಮರಗಳು ಕಣ್ಣಿಗೆ, ಮನಸ್ಸಿಗೆ ಆನಂದ ನೀಡುತ್ತವೆ. ಈ ರೀತಿ ಮರ ಬೆಳೆಸಲು ಎಲ್ಲರಿಗೂ ಪ್ರೇರಣೆ ಆಗಬೇಕು. ಈ ನಿಟ್ಟಿನಲ್ಲಿ ರಿಕ್ಷಾ ಚಾಲಕ ಸಂಘಟನೆಯನ್ನು ಗುರುತಿಸಿ ಗೌರವಿಸಲಾಗಿದೆ ಎಂದರು.

ಈ ಮರಗಳನ್ನು ಯಾವ ಕಾರಣಕ್ಕೂ ಕಡಿಯಲು ಬಿಡಬೇಡಿ. ರಸ್ತೆ ಮತ್ತಿತರ ಅಭಿವೃದ್ಧಿ ಸಂದರ್ಭ ಮರ ಕಡಿಯುವುದು ಅನಿವಾರ್ಯವಾದರೆ ಸೂಕ್ತ ಪರಿಹಾರ ಪಡೆದು ಈ ಮರಗಳನ್ನು ಬೇರೆಡೆ ಸ್ಥಳಾಂತರ ಮಾಡಿ ಪೋಷಿಸಿ ಎಂದು ಸಲಹೆ ನೀಡಿದರು.

ಬಿಎಂಎಸ್ ರಿಕ್ಷಾ ಚಾಲಕರ ಸಂಘಟನೆ ಅಧ್ಯಕ್ಷ ಪ್ರಕಾಶ್, ಕೋಶಾಧಿಕಾರಿ ರವಿ ಜಾಲ್ಸೂರು, ಕಾರ್ಯದರ್ಶಿ ನಾರಾಯಣ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತ್ತಡ್ಕ, ವಿಜಯಕುಮಾರ್ ಉಬರಡ್ಕ, ಪದಾಧಿಕಾರಿಗಳಾದ ಸುಂದರ, ಲೋಕೇಶ್, ಭಾನುಪ್ರಕಾಶ್, ಕಾರ್ತಿಕ್, ಪ್ರಭಾಕರ್, ದಿನಕರ್ ಮತ್ತಿತರರು ಉಪಸ್ಥಿತರಿದ್ದರು. ರಿಕ್ಷಾ ಚಾಲಕರ ಸಂಘದ ವತಿಯಿಂದ ಡಾ.ಆರ್.ಕೆ.ನಾಯರ್ ಅವರನ್ನು ಸನ್ಮಾನಿಸಲಾಯಿತು.