ಜಿಲ್ಲೆ

ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಣೆ 20ರಂದು

ಹಾನಗಲ್ಲ: ನಲವತ್ತು ವರ್ಷಗಳಿಂದ ಅನಧಿಕೃತ ಜನವಸತಿ ಪ್ರದೇಶದ ಮನೆಗಳಲ್ಲಿ ವಾಸಿಸುತ್ತಿದ್ದ 990 ಕುಟುಂಬಗಳಿಗೆ ಇ-ಸ್ವತ್ತು ಸಹಿತ ನೋಂದಣಿ ಮಾಡಿಸಿ ಮನೆಗಳ ಹಕ್ಕುಪತ್ರ ನೀಡಲಾಗುತ್ತಿದ್ದು, ಇನ್ನೂ ಇಂತಹ 9 ಸಾವಿರ ಪ್ರಕರಣಗಳು ತಾಲೂಕಿನಲ್ಲಿ ಬಾಕಿ ಉಳಿದಿವೆ ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.

ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮೇ 20ರಂದು ಹೊಸಪೇಟೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಲಿದ್ದಾರೆ ಎಂದು ವಿವರಿಸಿದರು.

ರಾಜ್ಯ ಕಂದಾಯ ಸಚಿವರ ಆದೇಶದಂತೆ ಕಳೆದ ಎರಡು ವರ್ಷಗಳಲ್ಲಿ ಇಂತಹ ಪ್ರಕರಣಗಳನ್ನು ಗುರುತಿಸಿ, ಅದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ನೋಂದಣಿ ಮಾಡಿಸಿ ಅನಧೀಕೃತ ಜನವಸತಿಯಲ್ಲಿ ಮನೆ ಕಟ್ಟಿಕೊಂಡವರ ಮನೆಗಳನ್ನು ಅಧಿಕೃತಗೊಳಿಸಲಾಗಿದೆ. ತಾಲೂಕಿನಲ್ಲಿ 990 ಮನೆಗಳು 2016ಕ್ಕಿಂತ ಮೊದಲು ಮನೆ ಕಟ್ಟಿದವುಗಳಾಗಿವೆ. ಇನ್ನೂ ಇಂತಹ 9 ಸಾವಿರ ಪ್ರಕರಣಗಳು ಬಾಕಿ ಇದ್ದು, ಸದ್ಯ 2000 ಅರ್ಜಿಗಳು ಪೊ›ಸೆಸಿಂಗ್ ಹಂತದಲ್ಲಿವೆ. ಆದ್ಯತೆ ಮೇಲೆ ಎಲ್ಲ ಮನೆಗಳ ಪರಿಶೀಲನೆ ನಡೆಸಿ ಅಧಿಕೃತ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಅಕ್ಕಿಆಲೂರು ಹೋಬಳಿಯ ಹಳ್ಳಿಬೈಲ, ಲಕ್ಷ್ಮೀಪುರ, ಹುನಗನಹಳ್ಳಿ, ಹರಳಕೊಪ್ಪ, ಕೊಂಡೋಜಿ, ತಿಳವಳ್ಳಿ, ಉಪ್ಪಣಸಿ, ಕಲಕೇರಿ, ಕೆಲವರಕೊಪ್ಪ, ಬೊಮ್ಮನಹಳ್ಳಿ ಹೋಬಳಿಯ ಬಿಂಗಾಪುರ, ಆಲದಕಟ್ಟಿ, ಅಕ್ಕಿವಳ್ಳಿ ಗ್ರಾಮಗಳಲ್ಲಿ ಈವರೆಗೆ 990 ಫಲಾನುಭವಿಗಳು ಅನಧಿಕೃತ ವಸತಿ ನಿವೇಶನಗಳಲ್ಲಿ ವಾಸಿಸುತ್ತಿರುವವರಾಗಿದ್ದಾರೆ. ಈ ಮನೆಗಳನ್ನು 15 ವರ್ಷ ಪರಭಾರೆ ಮಾಡುವಂತಿಲ್ಲ. ಬಾಡಿಗೆಗೂ ಕೊಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಫಲಾನುಭವಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಈ ಮನೆಗಳ ಮೇಲೆ ಸಾಲ ಪಡೆಯುವುದೂ ಸೇರಿ ಎಲ್ಲ ಹಕ್ಕು ಮಾಲೀಕರಿಗಿದೆ ಎಂದ ಅವರು, ಇದರೊಂದಿಗೆ ತಾಲೂಕಿನ 1 ಸಾವಿರ ಫಲಾನುಭವಿಗಳಿಗೆ ಪೋಡಿ ಮುಕ್ತ ದಾಖಲೆಗಳನ್ನು ನೀಡಲಾಗುತ್ತಿದೆ. ಒಟ್ಟು 40 ಬಸ್​ಗಳಲ್ಲಿ 2 ಸಾವಿರಕ್ಕೂ ಅಧಿಕ ಜನರು ಮೇ 20 ರಂದು ನಡೆಯುವ ಹೊಸಪೇಟೆಯ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಕ್ಕು ಪತ್ರ ಪಡೆಯಲಿದ್ದಾರೆ ಎಂದು ತಿಳಿಸಿದರು.

ಕಚೇರಿಗಳ ಸ್ಥಳಾಂತರ: ಹಾನಗಲ್ಲಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಮಿನಿ ವಿಧಾನಸೌಧದ ಬಳಿಯ ನೂತನ ವಿವಿಧ ಕಚೇರಿಗಳ ಸಂಕೀರ್ಣಕ್ಕೆ ಅಬಕಾರಿ, ಸಮಾಜ ಕಲ್ಯಾಣ, ಬಿಇಒ ಕಾರ್ಯಾಲಯ, ಬೃಹತ್ ನೀರಾವರಿ ಇಲಾಖೆ, ಕೆಶಿಪ್, ರೇಷ್ಮೆ ಇಲಾಖೆ ಕಚೇರಿಗಳು ಒಂದೆರಡು ದಿನಗಳಲ್ಲಿ ಸ್ಥಳಾಂತರಗೊಳ್ಳಲಿವೆ ಎಂದು ತಹಸೀಲ್ದಾರ್ ಎಸ್.ರೇಣುಕಾ ತಿಳಿಸಿದರು.