ಜಿಲ್ಲೆ

ಫಲಾನುಭವಿಗಳಿಗೆ ದಿನಸಿ, ತರಕಾರಿ ಕಿಟ್ ವಿತರಣೆ

 ಬೇಲೂರು: ಲಯನ್ಸ್ ಸಂಸ್ಥೆಯ ಅನ್ನಪೂರ್ಣ ಯೋಜನೆಯಡಿ ಬಡವರು, ಅಂಗವಿಕಲರು, ದೀರ್ಘಾವಧಿ ಅನಾರೋಗ್ಯ ಪೀಡಿತರು, ನಿರಾಶ್ರಿತರು, ವಯೋವೃದ್ಧರಿಗೆ 180 ದಿನಸಿ ಹಾಗೂ ತರಕಾರಿಯ ಆಹಾರದ ಕಿಟ್‌ಗಳನ್ನು ಲಯನ್ಸ್ ಸಂಸ್ಥೆ ಪದಾಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಶಾಸಕ ಎಚ್.ಕೆ.ಸುರೇಶ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಸೇವೆ ಎಂಬುದು ಪವಿತ್ರ ಕಾರ್ಯ. ಇಂತಹ ಸೇವಾ ಕಾರ್ಯವನ್ನು ಜಗತ್ತಿನಾದ್ಯಂತ ಸಲ್ಲಿಸುತ್ತಿರುವ ಲಯನ್ಸ್ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನೀಯವಾಗಿದೆ ಎಂದರು.

ಸರ್ಕಾರದ ಯಾವುದೇ ಅನುದಾನ ಪಡೆಯದೆ, ಸಂಸ್ಥೆ ಸದಸ್ಯರೇ ನೀಡಿದ ದೇಣಿಗೆಯಿಂದಲೇ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಜತೆಗೆ ಲಯನ್ಸ್ ಸಂಸ್ಥೆಯೂ ಅನ್ನಪೂರ್ಣ ಯೋಜನೆಯಡಿ ಒಂದು ತಿಂಗಳಿಗೆ ಬೇಕಾಗುವ ಆಹಾರವನ್ನು ಬಡವರಿಗೆ, ಅಂಗವಿಕಲರಿಗೆ ಮತ್ತು ನಿರಾಶ್ರಿತರಿಗೆ ಉಚಿತವಾಗಿ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಬೇಲೂರಿನಲ್ಲಿ ಲಯನ್ಸ್ ಸಂಸ್ಥೆ. ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಸೇವೆಗಳ ಮೂಲಕ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತ ಗಮನ ಸೆಳೆಯುತ್ತಿದೆ. ಸರ್ಕಾರವೇ ಪ್ರತಿಯೊಂದು ಕೆಲಸ ಮಾಡಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳ ಸೇವಾ ಕಾರ್ಯ ಅಗತ್ಯವಾಗಿದೆ, ಇಂತಹ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ಬೇಲೂರಿನಲ್ಲಿ ಲಯನ್ಸ್ ಕ್ಲಬ್ ಸ್ವಂತ ಕಟ್ಟಡ ಹೊಂದಿದ್ದು ಶಾಶ್ವತ ಸೇವಾ ಚಟುವಟಿಕೆ ನಡೆಸಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ನಾನೂ ಸಂಸ್ಥೆಗೆ ಸಹಕಾರ ನೀಡುವ ಮೂಲಕ ಹೆಚ್ಚಿನ ಸೇವೆಗೆ ಕೈಜೋಡಿಸಲಿದ್ದೇನೆ ಎಂದರು.

ಲಯನ್ಸ್ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ, ಬೇಲೂರು, ಕೊಣನೂರು, ಮಗ್ಗೆ, ಕೆಂಚಮ್ಮ ಹೊಸಕೋಟೆ, ಅರೇಹಳ್ಳಿ, ಬಿಕ್ಕೋಡು, ಅಲೂರಿನ ಎಂಟು ಲಯನ್ಸ್ ಸಂಸ್ಥೆಗಳು ಸೇರಿ 180 ಬಡ ಫಲಾನುಭವಿಗಳಿಗೆ ಶಾಸಕರ ಸಮ್ಮುಖದಲ್ಲಿ ಆಹಾರದ ಕಿಟ್ ವಿತರಿಸಿದ್ದೇವೆ. ಅಲ್ಲದೆ ಎಂಟು ಸಂಸ್ಥೆಯಿಂದ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗೆ 25 ಲಕ್ಷ ರೂ. ಎಂಜಿಎಫ್ ದೇಣಿಗೆ ನೀಡಿದ್ದರಿಂದ ನಮಗೆ ಸಂಸ್ಥೆಯಿಂದ ಅನ್ನಪೂರ್ಣ ಯೋಜನೆಗೆ ಅನುದಾನ ನೀಡಿದ್ದಾರೆ. ಕಳೆದ ತಿಂಗಳು ಎಂಟು ಸಂಸ್ಥೆಗಳಿಂದ ವನ ಮಹೋತ್ಸವ ಆಚರಿಸಿ ಸಸಿಗಳನ್ನು ನೆಟ್ಟು ಸಂಸ್ಥೆಯಿಂದ ಪೋಷಿಸಲಾಗುತ್ತಿದೆ ಎಂದರು.

ಲಯನ್ಸ್ ಸಂಸ್ಥೆ ವಲಯಾಧ್ಯಕ್ಷ ಚಾಮರಾಜ, ಬೇಲೂರು ಕ್ಲಬ್ ಅಧ್ಯಕ್ಷೆ ತಾರಾಮಣಿ ಸುರೇಶ್, ಮಗ್ಗೆ ಅಧ್ಯಕ್ಷ ಪುನೀತ್, ಬಿಕ್ಕೋಡು ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಆದರ್ಶ, ಖಜಾಂಚಿ ಸಂತೋಷ, ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ, ಸಂಸ್ಥೆಯ ಕೆ.ಎಲ್.ಸುರೇಶ್, ವೈ.ಬಿ.ಸುರೇಶ್, ಸ್ವರ್ಣ, ಹೆಬ್ಬಾಳು ಹಾಲಪ್ಪ, ಉಮೇಶ್, ಸೌಜನ್ಯಾ ಇತರರಿದ್ದರು.