ಬಾಳೆಹೊನ್ನೂರು: ಬಾಳೆಹೊನ್ನೂರು ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಲ್ಲಿಗೆ ಮೂಲ ಸೌಕರ್ಯಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಊರಿನ ಸ್ವಚ್ಛತೆಗಾಗಿ ಭದ್ರಾ ಸ್ಪೋರ್ಟ್ಸ್ ಕ್ಲಬ್‌ನಿಂದ ಕಸ ಸಂಗ್ರಹಣೆಯ ಬೃಹತ್ ತೊಟ್ಟಿಗಳನ್ನು ನೀಡಲಾಗುತ್ತಿದೆ ಎಂದು ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯ ಸುಧೀರ್ ತಿಳಿಸಿದರು.
ಪಟ್ಟಣದ ಬಿ.ಕಣಬೂರು ಗ್ರಾಪಂಗೆ ಭದ್ರಾ ಸ್ಪೋರ್ಟ್ಸ್ ಕ್ಲಬ್‌ನಿಂದ ಐದು ಬೃಹತ್ ಕಸ ಸಂಗ್ರಹದ ತೊಟ್ಟಿಗಳನ್ನು ಹಸ್ತಾಂತರಿಸಿ ಮಾತನಾಡಿ, ಸಾರ್ವಜನಿಕರಿಗೆ ಕಸ ಸಂಗ್ರಹ ಮಾಡುವ ಬಗ್ಗೆ ಜಾಗೃತಿ ಇರಬೇಕು. ತಮ್ಮ ಮನೆ, ಅಂಗಡಿಗಳಲ್ಲಿ ಸಂಗ್ರಹವಾದ ಕಸವನ್ನು ಕಸದ ತೊಟ್ಟಿಗಳಲ್ಲಿ ಹಾಕಿ ಊರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಕಸವನ್ನು ಎಲ್ಲೆಂದರಲ್ಲಿ ಹಾಕಿದರೆ ಹಸು, ನಾಯಿಗಳನ್ನು ಅದನ್ನು ರಸ್ತೆಗೆ ಎಳೆದು ತಂದು ಸ್ವಚ್ಛತೆ ಹಾಳು ಮಾಡಲಿವೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ ಎಂದರು.
ಭದ್ರಾ ಸ್ಪೋರ್ಟ್ಸ್ ಕ್ಲಬ್ ಗ್ರಾಮದ ಒಳಿತಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, 2019ರಿಂದ ವಿವಿಧ ಸೇವೆ ಸಲ್ಲಿಸಿದೆ. ಸರ್ಕಾರಿ ಆಸ್ಪತ್ರೆಗೆ ಸುಣ್ಣ ಬಣ್ಣ, ನೆರೆ ಸಂತ್ರಸ್ತರಿಗೆ ಗ್ಯಾಸ್‌ಸ್ಟವ್ ವಿತರಣೆ, ಸರ್ಕಾರಿ ಆಸ್ಪತ್ರೆಯ ಕೊಠಡಿಗೆ ಟೈಲ್ಸ್ ಅಳವಡಿಸಿಕೆ, ಡಯಾಲಿಸಿಸ್ ರೋಗಿಗೆ ಆರ್ಥಿಕ ನೆರವು ನೀಡಿದೆ. ಸಾರ್ವಜನಿಕರು, ಊರಿನ ಒಳಿತಿಗಾಗಿ ಕ್ಲಬ್ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಶಾಸಕರ ಅನುದಾನದಲ್ಲಿ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಬೀದಿದೀಪ ಅಳವಡಿಕೆ, ಪೊಲೀಸ್ ಠಾಣೆ ಸಹಕಾರದಲ್ಲಿ ಉತ್ತಮ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಪ್ರಭಾಕರ್ ಪ್ರಣಸ್ವಿ, ಪ್ರಮುಖರಾದ ಟಿ.ಎಂ.ಯೋಗೀಶ್, ಬಿ.ಎಸ್.ಸಾಗರ್, ಎಂ.ಸಿ.ಯೋಗೀಶ್ ಕಾರ್ಕಿ, ಎಂ.ಆರ್.ರವಿ ಮಾಗುಂಡಿ, ರೋಶನ್ ಮತ್ತಿತರರು ಹಾಜರಿದ್ದರು.