ಬೆಂಗಳೂರು: ರಾಜಧಾನಿ ವಿವಿಧೆಡೆ ಇರುವ ಬಹುತೇಕ ಇಂದಿರಾ ಕ್ಯಾಂಟೀನ್ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ, ಕೆಲವು ಕ್ಯಾಂಟೀನ್ಗಳ ಪಕ್ಕ ಆಹಾರ ಪೊಟ್ಟಣ ವಿತರಿಸುವ ಮೂಲಕ ನಿರ್ಗತಿಕರು, ಬಡವರು ಹಾಗೂ ಕೂಲಿ ಕಾರ್ವಿುಕರಿಗೆ ಉಚಿತ ಊಟ ನೀಡುವ ಕಾರ್ಯ ಗುರುವಾರ ಆರಂಭವಾಗಿದೆ.
ಲಾಕ್ಡೌನ್ ಆದೇಶ ಜಾರಿಗೊಳಿಸಿದ ನಂತರ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟ ನೀಡುವುದಾಗಿ ಸಿಎಂ ಯಡಿಯೂರಪ್ಪ ಸೋಮವಾರ ಘೋಷಿಸಿದ್ದರು. ಆದರೆ, ಕ್ಯಾಂಟೀನ್ಗಳಲ್ಲಿ ಮಂಗಳವಾರ ಊಟಕ್ಕಾಗಿ ನೂಕುನುಗ್ಗಲು ಹೆಚ್ಚಾಗಿದ್ದರಿಂದ ಉಚಿತ ಊಟ ನೀಡುವ ಆದೇಶ ಹಿಂಪಡೆದಿದ್ದರು. ಇದರಿಂದ ಸಾವಿರಾರು ಜನರು ತೊಂದರೆ ಅನುಭವಿಸಿದ್ದನ್ನು ಮನವರಿಕೆ ಮಾಡಿಕೊಂಡ ಬಿಬಿಎಂಪಿ, ಗುರುವಾರದಿಂದ ನಿರ್ಗತಿಕರು, ಬಡವರು ಹಾಗೂ ಕೂಲಿ ಕಾರ್ವಿುಕರು ಹೆಚ್ಚಾಗಿರುವ ವಾರ್ಡ್ ಗಳಲ್ಲಿ ಆಹಾರ ಪೊಟ್ಟಣಗಳನ್ನು ಉಚಿತವಾಗಿ ನೀಡುತ್ತಿದೆ.
20,700 ಜನರಿಗೆ ಆಹಾರ ನೀಡಿಕೆ
ರಾಜಧಾನಿಯಲ್ಲಿ ಮೊಬೈಲ್ ಕ್ಯಾಂಟೀನ್ ಸೇರಿ 198 ಇಂದಿರಾ ಕ್ಯಾಂಟೀನ್ಗಳಿವೆ. ಇವುಗಳಿಂದ ಪ್ರತಿನಿತ್ಯ ಒಂದು ಅವಧಿಗೆ 60ರಿಂದ 70 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ತೆರೆದ 87 ಕ್ಯಾಂಟೀನ್ಗಳ ಬಳಿ ಆಹಾರಕ್ಕಾಗಿ ನೂಕುನುಗ್ಗಲು ಉಂಟಾಗಿತ್ತು. ಆದ್ದರಿಂದ 100ರಿಂದ 500 ಆಹಾರ ಪೊಟ್ಟಣಗಳಂತೆ ಒಂದು ಅವಧಿಗೆ 20,700 ಜನರಿಗೆ ಆಹಾರ ವಿತರಣೆ ಮಾಡಲಾಯಿತು. ಸುಗಮವಾಗಿ ವಿತರಿಸಲು ಮಾರ್ಷಲ್ಗಳು ನೆರವಾದರು.
ಶುದ್ಧ ಕುಡಿಯುವ ನೀರಿನದ್ದೇ ಸಮಸ್ಯೆ
ಇಂದಿರಾ ಕ್ಯಾಂಟೀನ್ಗಳ ಬಳಿ ಊಟ ಮಾಡುವವರಿಗೆ ಕೈತೊಳೆಯಲು, ಊಟ ಮಾಡಿದ ನಂತರ ಕುಡಿಯಲು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ. ಸ್ವಚ್ಛತೆಯಿಲ್ಲದ ಕೈಗಳಿಂದಲೇ ಊಟ ಮಾಡುತ್ತಿದ್ದು, ರೋಗದ ಭೀತಿ ಎದುರಿಸುತ್ತಿದ್ದಾರೆ.
ಊಟ, ದಿನಸಿ ನೀಡಿದ ಸಂಘ-ಸಂಸ್ಥೆಗಳು
ನಗರದಲ್ಲಿ ಕೆಲವು ಸಂಘ-ಸಂಸ್ಥೆಗಳು ಹಾಗೂ ಫೌಂಡೇಷನ್ಗಳು ಜನರ ಸುರಕ್ಷತೆಗಾಗಿ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ರಸ್ತೆಯಲ್ಲಿ ಊಟವಿಲ್ಲದೆ ಮಲಗಿರುವ ನಿರ್ಗತಿಕರು, ಕೆಲವು ಮಾರುಕಟ್ಟೆಗಳ ಬಳಿ ವಾಸವಿರುವ ಕೂಲಿ ಕಾರ್ವಿುಕರಿಗೆ ಉಚಿತ ಊಟ ವಿತರಣೆ ಮಾಡುವುದು ಕಂಡುಬಂದಿತು. ಇನ್ನು ಕೆಲವು ಸಂಘಟನೆಗಳು ದಿನಸಿ ಸಾಮಗ್ರಿಯನ್ನು ವಿತರಣೆ ಮಾಡುತ್ತಿವೆ.
ಅಂತರ ಕಾಯ್ದುಕೊಳ್ಳಲು ಕ್ರಮ
ಇಂದಿರಾ ಕ್ಯಾಂಟೀನ್ಗಳ ಬಳಿ ಅಂತರ ಕಾಯ್ದುಕೊಂಡು ಆಹಾರ ಪಡೆಯುವಂತೆ ತಲಾ ಇಬ್ಬರು ಮಾರ್ಷಲ್ಗಳನ್ನು ನೇಮಕ ಮಾಡಲಾಗಿದೆ. ಕೆಲವೆಡೆ ನಿಗದಿತ ಅಂತರದಲ್ಲಿ ಬಾಕ್ಸ್ಗಳನ್ನು ನಿರ್ವಿುಸಿದ್ದು, ಅಂತರದಲ್ಲಿ ನಿಂತು ಊಟ ಪಡೆಯಲು ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.