ಬೆಂಗಳೂರು: ಆರ್ಯವೈಶ್ಯ ಸಮಾಜದ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದು ಕರ್ನಾಟಕ ಬಯೋ ಎನರ್ಜಿ ಡೆವಲಪ್‌ಮೆಂಟ್ ಬೋರ್ಡ್ ಅಧ್ಯಕ್ಷರಾದ ಎಸ್.ಇ. ಸುಧೀಂದ್ರ ಭರವಸೆ ನೀಡಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಅಂಗವಿಕಲರಿಗೆ ಮಾಸಾಶನ, ವಿಧವಾ ಮಹಿಳೆಯರಿಗೆ ಪಿಂಚಣಿ, ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿದರು.
ಈಗಾಗಲೇ ಸಿದ್ದರಾಮಯ್ಯ ಅವರ ಸರ್ಕಾರ ಆರ್ಯವೈಶ್ಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲೂ ಅಗತ್ಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಆರ್ಯವೈಶ್ಯ ಮಹಾಸಭಾ ಖಾಸಗಿಯಾಗಿ ಸಮಾಜದ ಅರ್ಹರಿಗೆ ವಿವಿಧ ನೆರವು ನೀಡುತ್ತಿರುವುದು ಶ್ಲಾಘನೀಯ.
ಸರ್ಕಾರದ ಭಾಗವಾಗಿ ಕರ್ನಾಟಕ ಆರ್ಯವೈಶ್ಯ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದರ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಶೀಘ್ರದಲ್ಲಿ ಈ ಸ್ಥಾನ ತುಂಬುವ ಕೆಲಸ ಆಗಲಿದೆ ಎಂದು ಹೇಳಿದರು.
ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶೆಂಕರ್ ಮಾತನಾಡಿ, ಕಳೆದ ಏಳು ವರ್ಷದಿಂದ ಆರ್ಯವೈಶ್ಯ ಸಮಾಜ ಬಡವರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾ ಬಂದಿದೆ, ಮುಂದಿನ ದಿನಗಳಲ್ಲಿ ನಮ್ಮ ಸೇವೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ 180 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, 53 ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ, ಸಂಧ್ಯಶ್ರೀ ಯೋಜನೆಯಡಿ 309 ವಿಧವಾ ಮಹಿಳೆಯರಿಗೆ ಮಾಸಾಶನ, 260 ಅಂಗವಿಕಲರಿಗೆ ಮಾಸಾಶನ ಹಾಗೂ ಅಮರಜ್ಯೋತಿ ವಿಮೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್.ವಿ. ಇನ್‌ಸ್ಟಿಟ್ಯೂಟ್ ಜಂಟಿ ಕಾರ್ಯದರ್ಶಿ ಡಿ.ಪಿ. ನಾಗರಾಜ್, ಇಂಡಿಯನ್ ರೈಲ್ವೆ ಆಪರೇಷನ್ ಮ್ಯಾನೇಜರ್ (ಮೈಸೂರು ವಿಭಾಗ) ಹರಿತಾ ಮತ್ತಿತರರು ಉಪಸ್ಥಿತರಿದ್ದರು.