ಮೈಸೂರು: ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ರಂಜಾನ್ ಅಂಗವಾಗಿ ತೊಣಚಿಕೊಪ್ಪಲು, ಜನತಾನಗರದಲ್ಲಿ ವಾಸವಾಗಿರುವ ಮುಸ್ಲಿಮರಿಗೆ ದಿನಬಳಕೆ ಪದಾರ್ಥಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ, ಕರೊನಾ ವೈರಸ್‌ನಿಂದ ಎಲ್ಲರೂ ಅತ್ಯಂತ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಂಜಾನ್ ಹಬ್ಬ ಬಂದಿದ್ದು, ಜಾತಿ, ಮತ, ಭೇದವಿಲ್ಲದೇ ಮುಸ್ಮಿಮರಿಗೂ ಸಹಾಯಹಸ್ತ ನೀಡಲಾಗುತ್ತಿದೆ. ಉಳ್ಳವರು ಅಸಹಾಯಕರಿಗೆ ದಾನ ಧರ್ಮ ಮಾಡಿದರೆ ಎಷ್ಟೋ ಉಪಕಾರವಾಗುತ್ತದೆ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗ ಕಾರ್ಯದರ್ಶಿ ಹರೀಶ್ ಮೊಗಣ್ಣ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಎಲ್ಲ ವರ್ಗದವರಿಗೂ ಕೊಡುಗೆ ನೀಡಿದ್ದಾರೆ. ಧ್ವನಿ ಇಲ್ಲದ ಎಲ್ಲರಿಗೂ ಧ್ವನಿಯಾಗಿರುವ ಅಪರೂಪದ ವ್ಯಕ್ತಿ ಸಿದ್ದರಾಮಯ್ಯ ಎಂದು ಬಣ್ಣಿಸಿದರು.
ಮುಖಂಡರಾದ ಚಿಕ್ಕಚಿಕ್ಕಣ್ಣ, ಗುಡ್ಡಪ್ಪ ಶಿವಬೀರ, ನಾಗರಾಜ್, ಪುಟ್ಟಸ್ವಾಮಿ, ರಾಜಶೇಖರ್, ಬೀರೇಶ್, ಬೀರಪ್ಪ, ಶ್ರೀನಿವಾಸ್, ಸುನಿಲ್ ಸಿಂಹ ಇತರರು ಇದ್ದರು.