ಜಿಲ್ಲೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಸಲಹೆ

ಕೆ.ಎನ್.ರಾಘವೇಂದ್ರ

ಶ್ರೀರಂಗಪಟ್ಟಣ: ಶ್ರಮಿಕ ವರ್ಗದ ಜನತೆ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡುವುದರ ಜತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಬಿಜೆಪಿ ಯುವ ನಾಯಕ ಇಂಡುವಾಳು ಎಸ್. ಸಚ್ಚಿದಾನಂದ ಕಿವಿಮಾತು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿರುವ ಶ್ರಮಿಕ ವರ್ಗದ ಕಟ್ಟಡ ಕಾರ್ಮಿಕರಿಗೆ ಬಟ್ಟೆ ವಿತರಿಸಿ ಮಾತನಾಡಿದ ಅವರು, ಶ್ರಮಿಕರ ಮಕ್ಕಳು ಕಟ್ಟಡ ಕಾರ್ಮಿಕರಾಗಿಯೇ ಬದುಕುವಂತಹ ಸ್ಥಿತಿ ನಿರ್ಮಾಣ ಮಾಡದೇ ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸುವಂತೆ ಪಾಲಕರು ಮಾಡಬೇಕಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ಅವರು ಕಟ್ಟಡ ಕಾರ್ಮಿಕರು, ಶ್ರಮಿಕ ವರ್ಗದ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ವಿಶ್ವಕರ್ಮದಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದರ ಜತೆಗೆ ತಾವೂ ಸಹ ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.

ಕಾರ್ಮಿಕರು, ಶ್ರಮಜೀವಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗದವರ ಜೀವನಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರ ಆರ್ಥಿಕ ಭದ್ರತೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣವನ್ನು ಉದ್ದೇಶಿಸಿ ರೂಪಿಸಲಾದ ಈ ಯೋಜನೆಗಳು ಅವರ ಕುಟುಂಬದ ಭವಿಷ್ಯಕ್ಕೂ ಬಲವಾದ ಬೆಂಬಲವಾಗುತ್ತವೆ. ಇಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಬಿಜೆಪಿ ಮುಖಂಡರಾದ ಪೈಲ್ವಾನ್ ಮಹದೇವು, ಪೈಲ್ವಾನ್ ಲಕ್ಷ್ಮಣ್, ಗ್ರಾ.ಪಂ ಸದಸ್ಯರಾದ ಸಾಗರ್, ಕೃಷ್ಣಾನಂದ, ಮುಖಂಡರಾದ ಸ್ವಾಮಿ, ರಾಮು, ಜಗದೀಶ್, ನಾಗರಾಜು, ಸೋಮಣ್ಣ, ಪುಟ್ಟಣ್ಣ, ಕುಮಾರ, ಚೇತನ್, ಸುರೇಶ, ರಾಘವೇಂದ್ರ, ಶರತ್, ಶಶಿ, ಮೋಹನ್, ಕುಮಾರ್, ವೆಂಕಟೇಶ ಇತರರಿದ್ದರು.