ಮಂಡ್ಯ: ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗದ ಮಾರ್ಗ ಅನುಸರಿಸಿ ಸ್ವಾವಲಂಬಿಗಳಾಗಬೇಕೆಂದು ಲಯನ್ಸ್ ಸಂಸ್ಥೆಯ ಮಲ್ಟಿಪಲ್ ಕೌನ್ಸಿಲ್ ಸದಸ್ಯ ಡಾ.ಎನ್.ಕೃಷ್ಣೇಗೌಡ ಸಲಹೆ ನೀಡಿದರು.
ತಾಲೂಕಿನ ಕೀಲಾರ ಗ್ರಾಮದಲ್ಲಿ ಮಂಡ್ಯ ಶುಗರ್ ಸಿಟಿ ಲಯನ್ಸ್ ಫೌಂಡೇಷನ್ ಹಾಗೂ ಕ್ಷೀರಸಾಗರ ಮಿತ್ರಕೂಟ ಕೀಲಾರ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೊಲಿಗೆ ತರಬೇತಿ ಪಡೆದ ಆರನೇ ತಂಡದ ಕಲಿಕಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ದಿನ ನಿತ್ಯದ ಕೆಲಸಗಳ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ತರಬೇತಿ ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗ ಪ್ರಾರಂಭಿಸುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಡ್ಯ ಶುಗರ್ ಸಿಟಿ ಲಯನ್ಸ್ ಫೌಂಡೇಷನ್ ಅಧ್ಯಕ್ಷ ಲಯನ್ ಜಿ.ಎ.ರಮೇಶ್ ಮಾತನಾಡಿ, ಶುಗರ್ ಸಿಟಿ ಲಯನ್ಸ್ ಮತ್ತು ಮಂಡ್ಯ ಸೆಂಟೇನಿಯಲ್ ಲಯನ್ಸ್ ಜತೆಯಾಗಿ ಕ್ಷೀರಸಾಗರ ಮಿತ್ರಕೂಟದ ನೆರವಿನೊಂದಿಗೆ ಒಪ್ಪಂದ ಮಾಡಿಕೊಂಡು ನಿರಂತರವಾಗಿ ಹೊಲಿಗೆ ತರಬೇತಿ ಕೇಂದ್ರ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ನಡೆಯುತ್ತಿದೆ. ತರಬೇತಿ ಪಡೆದ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಹೇಳುವಾಗ ನಮಗೆ ಖುಷಿಯಾಗುತ್ತದೆ. ಈ ಕೇಂದ್ರ ಮುಂದುವರೆಯಲು ನಮ್ಮ ಲಯನ್ಸ್ ಸಂಸ್ಥೆಗಳಿಂದ ಎಲ್ಲ ರೀತಿಯ ನೆರವನ್ನು ನೀಡಲಾಗುತ್ತದೆ ಎಂದರು.
ಮಂಡ್ಯ ಶುಗರ್ ಸಿಟಿ ಲಯನ್ಸ್ ಅಧ್ಯಕ್ಷ ಪ್ರೇಮಾನಂದ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಮಾ ರಮೇಶ್, ಮೀನಾಕ್ಷಿ ಆನಂದ್, ನಿತ್ಯಾನಂದ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಈರಶೆಟ್ಟಿ, ಕ್ಷೀರಸಾಗರ ಮಿತ್ರಕೂಟದ ಗೌರವಾಧ್ಯಕ್ಷ ಕೆ.ಪಿ.ವೀರಪ್ಪ, ಅಧ್ಯಕ್ಷ ಕೆ.ಜಯಶಂಕರ್, ಸಂಚಾಲಕ ಕೆ.ಎಂ.ಕೃಷ್ಣೇಗೌಡ, ಸದಸ್ಯ ಕೆ.ಎಂ.ಶಿವಣ್ಣ, ಹೊಲಿಗೆ ತರಬೇತಿ ನೀಡುವ ಶಿಕ್ಷಕಿ ವಿನುತಾ ಇದ್ದರು.