ಜಿಲ್ಲೆ

ನಗರದ ಜನತೆಗೆ ಕಾವೇರಿ ತೀರ್ಥ ವಿತರಣೆ

ಮಡಿಕೇರಿ: ಶ್ರೀ ಕಾವೇರಿ ಭಕ್ತ ಮಂಡಳಿ ವತಿಯಿಂದ ಮಡಿಕೇರಿ ನಗರದ ಜನತೆಗೆ ಕಾವೇರಿ ತೀರ್ಥ ವಿತರಿಸಲಾಯಿತು.


ಕಳೆದೆರಡು ವರ್ಷ ಕರೊನಾದಿಂದಾಗಿ ಸಾಧ್ಯವಾಗಿರಲಿಲ್ಲ. ಈ ಬಾರಿ ೬೮ನೇ ವರ್ಷದ ಕಾವೇರಿ ತೀರ್ಥ ವಿತರಣಾ ಕಾರ್ಯಕ್ರಮ ಆಕರ್ಷಕ ಕಾವೇರಿ ರಥ ಮೆರವಣಿಗೆಯ ಮೂಲಕ ತೀರ್ಥ ವಿತರಿಸಲಾಯಿತು.


ಮಡಿಕೇರಿಯ ಮೇಲಿನ ಗೌಡ ಸಮಾಜದ ಬಳಿ ಕಾವೇರಿ ಮಾತೆಗೆ ವಿಗ್ರಹಕ್ಕೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣಪತಿ ಹೋಮ, ಕಳಸ ಕಟ್ಟುವುದು, ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನಡೆಯಿತು.
ಕಾವೇರಿ ಮಾತೆಯ ವಿಗ್ರಹವನ್ನು ಅಲಂಕೃತ ಮಂಟಪದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾವೇರಿ ಭಕ್ತಮಂಡಳಿಯ ಪದಾಧಿಕಾರಿಗಳು ತಲಕಾವೇರಿಯಿಂದ ತಂದ ಪವಿತ್ರ ತೀರ್ಥವನ್ನು ಕಾವೇರಿ ರಥದ ಮೆರವಣಿಗೆ ಮೂಲಕ ನಗರದ ಜನತೆಗೆ ವಿತರಿಸಿದರು.


ಈ ಸಂದರ್ಭ ಕಾವೇರಿ ಭಕ್ತ ಮಂಡಳಿ ಅಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ನರೇಂದ್ರ, ಗೌರವಾಧ್ಯಕ್ಷ ಚೇತನ್ ಕುಮಾರ್, ಸದಸ್ಯರಾದ ಜಗದೀಶ್ ಪೂಜಾರಿ, ವಿನು, ಶೇಖರ್ ಮತ್ತಿತರರು ಇದ್ದರು.