ಜಿಲ್ಲೆ

ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ

ನರಗುಂದ: ತಾಲೂಕಿನಲ್ಲಿ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 31ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ. ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ನಿರ್ಧರಿಸಲಾಗಿದೆ. ವಿಶೇಷ ಅಭಿಯಾನದ ಮೂಲಕ ಮಕ್ಕಳನ್ನು ಈ ಬಾರಿ ಸರ್ಕಾರಿ ಶಾಲೆಗಳತ್ತ ಗಮನ ಸೆಳೆಯುವ ವಿನೂತನ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

31ರಂದು ಸರ್ಕಾರಿ ಶಾಲೆಗಳನ್ನು ತಳಿರು, ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಹಾಲು, ಸಿಹಿಯೂಟ ವಿತರಿಸಲಾಗುತ್ತದೆ. ಜೂ. 1 ರಿಂದ 30ರವರೆಗೆ 1ನೇ ತರಗತಿಗೆ ಮಕ್ಕಳನ್ನು ದಾಖಲಿಸುವಂತೆ ಶಿಕ್ಷಕರಿಂದ ದಾಖಲಾತಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ.

ಬುನಾದಿ ಹಂತದ ಭಾಷಾ ಮತ್ತು ಸಂಖ್ಯಾ ಜ್ಞಾನದ ಹೊಸ ಶಿಕ್ಷಣ ಯೋಜನೆ ಪ್ರಸಕ್ತ ವರ್ಷದಿಂದ ಜಾರಿಗೊಂಡಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ 30 ನಿಮಿಷ ಹೆಚ್ಚಳಗೊಳಿಸಿ ಅವರಿಗೆ ಶುದ್ಧಬರಹ, ಸರಳ ಲೆಕ್ಕ ಬಿಡಿಸುವಿಕೆ ಹಾಗೂ ಕಲಿಯುವಿಕೆ ಕುರಿತು ಹೆಚ್ಚುವರಿ ಶಿಕ್ಷಣ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನರಗುಂದ ತಾಲೂಕಿನಲ್ಲಿ 54 ಸರ್ಕಾರಿ ಪ್ರಾಥಮಿಕ, 17 ಪ್ರೌಢ. 21 ಅನುದಾನ ರಹಿತ ಪ್ರಾಥಮಿಕ, 9 ಪ್ರೌಢ. 1 ಮುರಾರ್ಜಿ ದೇಸಾಯಿ ವಸತಿ ಶಾಲೆ, 1ಮೌಲಾನಾ ಆಜಾದ ಶಾಲೆ, 1 ಸಿಬಿಎಸ್‌ಸಿ ಶಾಲೆಗಳಿವೆ. ಈ ಬಾರಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ವಿವಿಧ ವಿಷಯಗಳ 1,53,639 ಪಠ್ಯ-ಪುಸ್ತಕ ಹಾಗೂ 9,463 ಮಕ್ಕಳಿಗೆ ವಿತರಿಸುವ ಸಮವಸ್ತ್ರಗಳನ್ನು ಆಯಾ ಶಾಲೆ ಮುಖ್ಯೋಪಾಧ್ಯಾಯರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತೆಗೆದುಕೊಂಡು ಹೋಗಿದ್ದಾರೆ. ಬಾಕಿ ಉಳಿದಿರುವ ಎಲ್ಲ ಶಾಲೆಗಳಿಗೂ ಪಠ್ಯ,ಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತದೆ ಎಂದು ಬಿಆರ್‌ಸಿ ಅಧಿಕಾರಿ ಬಿ.ಎಫ್.ಮಜ್ಜಗಿ ತಿಳಿಸಿದರು.

103 ಹುದ್ದೆ ಖಾಲಿ

ನರಗುಂದ ಪಟ್ಟಣ ಸೇರಿ ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 61, ಪ್ರೌಢ ವಿಭಾಗದಲ್ಲಿ 42 ಸೇರಿ ಒಟ್ಟು,103 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 72 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ ಪ್ರಾಥಮಿಕ 90, ಪ್ರೌಢ ವಿಭಾಗದಲ್ಲಿ 73 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಖಾಲಿ ಶಿಕ್ಷಕರ ಹುದ್ದೆಗಳನ್ನು ನಿಗದಿತ ಅವಧಿಯೊಳಗೆ ಭರ್ತಿ ಮಾಡಬೇಕಾದ ಅನಿವಾರ್ಯತೆ ಶಿಕ್ಷಣ ಇಲಾಖೆಗೆ ಬಂದೊದಗಿದೆ.