ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ವಿಜಯದಶಮಿ ದಿನದ ವಿಶೇಷ ಪೂಜೆಗಳೊಂದಿಗೆ ಭಕ್ತರಿಗೆ ಬನ್ನಿ ಪತ್ರೆ ವಿತರಿಸಲಾಯಿತು.
ಕಳೆದ ಒಂಬತ್ತು ದಿನಗಳಿಂದ ಶ್ರೀಮಠದ ಪೀಠಾಧಿಫತಿ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ಲೋಕಕಲ್ಯಾಣರ್ಥ ಮೌನ ಅನುಷ್ಠಾನ ಕೈಗೊಂಡು ನವದುರ್ಗೆಯರ ವಿವಿಧ ಪೂಜಾ ಕೈಂಕರ್ಯದೊಂದಿಗೆ ಶ್ರೀ ಪಾರ್ವತಿ ದೇವಿಯ ಪ್ರಾರ್ಥನೆ ನೆರವೇರಿಸಿದರು.
ದಶಮಿಯ ದಿನವಾದ ಶನಿವಾರ ಶ್ರೀಮಠದಲ್ಲಿ ನವಗ್ರಹ ಪೂಜೆ, ಕ್ಷೇತ್ರಾಧಿಪತಿ ಶ್ರೀಕಾಶಿಚಂದ್ರಮೌಳೇಶ್ವರ ಸ್ವಾಮಿ ಸೇರಿದಂತೆ ಪರಿವಾರ ದೇವತೆಗಳಿಗೆ ರುದ್ರಾಭಿಷೇಕ, ಅಷ್ಟಲಕ್ಷೀ ಹೋಮ ಅರ್ಪಣೆಯೊಂದಿಗೆ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿ ರಾಜೋಪಚಾರ ಸಲ್ಲಿಸಿ ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಿಸಿದರು.
ಬಳಿಕ ಸಂಜೆ ಗೋಧೂಳಿ ಲಗ್ನದಲ್ಲಿ ಮಠದ ಆವರಣದಲ್ಲಿ ಯಾತ್ರದಾನದ ಬಳಿಕ ಸರ್ವಾಲಾಕೃತಗೊಂಡಿದ್ದ ವಿಶೇಷ ಕಾಷ್ಟ ರಥದಲ್ಲಿ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಪಂಚಲೋಹದ ಉತ್ಸವ ಮೂರ್ತಿಯನ್ನು ಶ್ರೀಗಳಿಂದ ಪ್ರತಿಷ್ಠಾಪಿಸಿದ್ದು, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಅವರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶಕ್ತಿದೇವತೆ ಅಮ್ಮನವರ ಉತ್ಸವದ ಬಳಿಕ 25 ದಂಪತಿ ಪೂಜೆ ನೆರವೇರಿಸಿ ನಂತರ ಖ್ಯಾತ ಜ್ಯೋತಿಷಿ ಮತ್ತು ಅದ್ವೈತ ವಾಚಸ್ಪತಿ ಡಾ.ವಿ.ಭಾನುಪ್ರಕಾಶ್ ಶರ್ಮ ಅವರ ನಿರ್ದೇಶನದಂತೆ ಕದಳಿವೃಕ್ಷ ಸಮೇತ ಶಮಿವೃಕ್ಷಕ್ಕೆ ಪೂಜಾ ಆಚರಣೆಗಳನ್ನು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಿ ವೀರಭದ್ರನ ಪೂಜಾ ಕುಣಿತದೊಂದಿಗೆ ವೀರಗಾಸೆಯಿಂದ ಶಮಿವೃಕ್ಷ ಛೇದನ ಬಳಿಕ ಬನ್ನಿಪತ್ರೆಯನ್ನು ಆವರಣದಲ್ಲಿ ನೆರೆದಿದ್ದ ಭಕ್ತರಿಗೆ ವಿತರಿಸಲಾಯಿತು.
ಶ್ರೀಗಳು ವಿಜಯದಶಮಿಯ ವಿಶೇಷ ಆಚರಣೆ ಹಾಗೂ ಬನ್ನಿ ಪತ್ರೆಯ ವಿಶೇಷತೆಗಳ ಕುರಿತು ತಿಳಿಸಿ ಭಕ್ತರಿಗೆ ಪತ್ರೆ ವಿತರಿಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ರಾಜಣ್ಣ, ಜ್ಯೋತಿಷಿ ಮೂಗೂರು ಮಧುದೀಕ್ಷಿತ್, ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ಪೂರ್ಣಿಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಪರಿವರ್ತನ ಹಾಗೂ ಓಂಶ್ರೀನಿಕೇತನ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಪುಟ್ಟೇಗೌಡ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.