ಜಿಲ್ಲೆ

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಮತ

ಮಂಡ್ಯ: ವಿದ್ಯಾರ್ಥಿಗಳ ಸಮತೋಲನ ಬೆಳವಣಿಗೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಹಕಾರಿ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಕೀಲಾರ ಗ್ರಾಮದ ಎಂ.ವಿ.ಎಂ ಪ್ರೌಢಶಾಲೆ ಆವರಣದಲ್ಲಿ ಕೀಲಾರ ಅಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆ ಮತ್ತು ಶಾಲೆಗೆ ಬ್ಯಾಂಡ್‌ಸೆಟ್, ಕ್ರೀಡೋಪಕರಣ, ಕ್ರೀಡಾ ಸಮವಸ್ತ ವಿತರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳ ಕೌಶಲಜ್ಞಾನ ಹೆಚ್ಚಿಸಿಕೊಂಡರೆ ಆರೋಗ್ಯಕರ ಮನಸ್ಸು ಮತ್ತು ಸದೃಡ ದೇಹ ಬೆಳೆಯುತ್ತದೆ. ಕ್ರೀಡಾ ಕೌಶಲತೆಯಿಂದ ಉತ್ತಮ ಭವಿಷ್ಯವಿದೆ. ಕ್ರೀಡೆಗಳು ಕೇವಲ ಆಟಗಳಿಗೆ ಸೀಮಿತವಲ್ಲ, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಮಾಣಪತ್ರಗಳಿದ್ದರೆ ನೌಕರಿಗೆ ಅನುಕೂಲವಾಗುತ್ತದೆ ಎಂದು ನುಡಿದರು.

ಜೀವನದ ಆರಂಭದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಉತ್ತಮ ಹವ್ಯಾಸ, ಮೊಬೈಲ್‌ನಿಂದ ದೂರವಿದ್ದವರು ಸಾಧನೆ ಮಾಡಬಹುದು. ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಕೆ ಉತ್ತಮ. ಸರ್ಕಾರಿ ಶಾಲಾ ಶಿಕ್ಷಣದಲ್ಲಿ ತಂತ್ರಜ್ಞಾನ ಜತೆಗೆ ಕಲೆ ಮತ್ತು ದೈಹಿಕ ಶಿಕ್ಷಣವನ್ನು ಪ್ರೋತ್ಸಾಹಿಸುವ ಅಗತ್ಯವಿದೆ. 21ನೇ ಶತಮಾನದ ಎಐ ತಂತ್ರಜ್ಞಾನದ ಕಾಲದಲ್ಲಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಎಲ್ಲ ಕಲಿಕಾ ಸೌಲಭ್ಯಗಳು ಲಭಿಸಲಿ ಎಂದು ಒತ್ತಾಯಿಸಿದರು.

ಕೀಲಾರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಿ.ಶಿವರಾಮು, 2ನೇ ಜಿಲ್ಲಾ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಚಾಂಷುಗರ್ ವ್ಯವಸ್ಥಾಪಕ ಎಂ.ರವಿ, ಶಾಲಾ ಅಧ್ಯಕ್ಷ ಕೆ.ಎಂ.ರುದ್ರೇಗೌಡ, ವಲಯಾಧ್ಯಕ್ಷ ಕೆ.ಎಂ.ಕುಮಾರ್, ನಿವೃತ್ತ ವೈದ್ಯಾಧಿಕಾರಿ ಡಾ.ಕೆ.ರಾಜು ಆಲಕೆರೆ, ನಿವೃತ್ತ ಮುಖ್ಯಶಿಕ್ಷಕ ಎಸ್.ಶಿವಣ್ಣ, ಉಪನ್ಯಾಸಕ ಕೆ.ಎಸ್.ಶಿವರಾಮು ಕೀಲಾರ, ವಿಜಯಕುಮಾರ್, ಕೆ.ಜೆ.ಸುರೇಶ್ ಇತರರಿದ್ದರು. ಇದೇ ಸಂಧರ್ಭದಲ್ಲಿ ಶಾಲೆಗೆ ಅಂದಾಜು 50 ಸಾವಿರ ರೂ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ನಿವೃತ್ತ ಇಂಜಿನಿಯರ್ ಟಿ.ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು.