ಜಿಲ್ಲೆ

ಕಳಸದಲ್ಲಿ ಮಹಿಳೆಯರಿಗೆ ಬಾಗಿನ ವಿತರಣೆ

ಕಳಸ: ಕಳಸ ಸಾರ್ವಜನಿಕ ಶ್ರೀದುರ್ಗಾ ಪೂಜಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 37ನೇ ವರ್ಷದ ಶ್ರೀದುರ್ಗಾ ಪೂಜಾ ಮಹೋತ್ಸವದ ಒಂಬತ್ತನೇ ದಿನ ಪವಿತ್ರ ದುರ್ಗಾ ಹೋಮ, ತ್ರಿಮೂರ್ತಿ ಪೂಜೆ, ಹೂವಿನ ಪೂಜೆ ನಡೆಸಲಾಯಿತು.

ಬೆಳಗ್ಗೆ ರಾಜಲಕ್ಷ್ಮೀ ಬಿ.ಜೋಷಿ ಮತ್ತು ಸಂಗಡಿಗರಿಂದ ಸೌಂದರ್ಯ ಲಹರಿ ಕಾರ್ಯಕ್ರಮ ನಡೆಯಿತು. ಈ ವರ್ಷ ರೈತರ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಅನ್ನದಾತರಾದ ರೈತರಿಗೆ ಸಮೃದ್ಧಿ, ಉತ್ತಮ ಬೆಳೆ ಸಿಗಲಿ ಎಂದು ದೇವಿ ಪಾದಕ್ಕೆ ವಿನಂತಿ ಸಲ್ಲಿಸಲಾಯಿತು. ಸಂಜೆ ರಂಗ ಪೂಜೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿ ಅಭಿನಯ ಕಲಾವಿದರು ಶಾಂಭವಿ ನಾಟಕ ಪ್ರದರ್ಶನ ನಡೆಸಿದರು.

ದುರ್ಗಾ ಪೂಜೆಗೆ ಬಂದ ಮಹಿಳೆಯರಿಗೆ ಶಾಸಕಿ ನಯನ ಮೋಟಮ್ಮ ಬಾಗಿನ ನೀಡಿ ದುರ್ಗಾ ದೇವಿ ಆಶೀರ್ವಾದ ಎಲ್ಲರಿಗೂ ಸಿಗಲೆಂದು ಹಾರೈಸಿದರು. ಎರಡೂವರೆ ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದುರ್ಗಾ ದೇವಿ ಶಕ್ತಿಯ ಸಾಕಾರ ರೂಪ. ಮಹಿಳೆಯರೇ ಸಮಾಜದ ನಿಜವಾದ ಶಕ್ತಿ. ದೇವಿಯ ಆಶೀರ್ವಾದದಿಂದ ನಮ್ಮೆಲ್ಲರ ಕುಟುಂಬಗಳಲ್ಲಿ ಸಮೃದ್ಧಿ, ಸಂತೋಷ ಸಿಗಲಿ ಎಂದು ಶಾಸಕಿ ನಯನ ಮೋಟಮ್ಮ ಶುಭ ಹಾರೈಸಿದರು.