ವಿಜಯವಾಣಿ ಸುದ್ದಿಜಾಲ ಉಡುಪಿ
ಸಾಹಿತ್ಯದಲ್ಲಿ ಅಪಾರ ಅನುಭವ ಹೊಂದಿದ್ದ ಡಾ.ಉಪ್ಪಂಗಳ ರಾಮ ಭಟ್, ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದರು. ಬಳಿಕ ಕನ್ನಡ ವಿಭಾಗದ ಮುಖ್ಯಸ್ಥರಾದ ಅವರು, ಕಾಲೇಜಿನಲ್ಲಿ ಕನ್ನಡ ಸಂಘ ರಚಿಸಿ ಮಕ್ಕಳಿಗೆ ಚುಟುಕು, ಹನಿಗವನ, ಭಾಷಣ ಸ್ಪರ್ಧೆಯ ಮೂಲಕ ಕನ್ನಡಾಭಿಮಾನ ಹೊತ್ತಿಸಿ, ಮಾತೃ ಭಾಷೆಯ ಪ್ರೀತಿ ಹೆಚ್ಚಿಸಿದ್ದರು ಎಂದು ಪ್ರೊ. ಲಕ್ಷ್ಮೀನಾರಾಯಣ ಕಾರಂತ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಡಾ. ಉಪ್ಪಂಗಳ ರಾಮಭಟ್ಟ ಮತ್ತು ಶಂಕರಿ ಆರ್. ಭಟ್ ಅವರ ಅಕಲಂಕ ದತ್ತಿ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಪ್ಪಂಗಳ ಅವರು ನಿವೃತ್ತಿಯ ನಂತರವೂ ಸಹ ಸಂಶೋಧಕರಿಗೆ ಮಾರ್ಗದರ್ಶನ ನೀಡಿದರು. ಅಂತಹ ಮಹಾನ್ ಸಾಧಕನ ನೆನಪಿಗಾಗಿ ನೀಡುವ ಅಕಲಂಕ ಪುರಸ್ಕಾರವನ್ನು ಮಕ್ಕಳ ಸಾಹಿತಿಯೂ ಆಗಿರುವ ಹಿರಿಯರಾದ ಇಂದಿರಾ ಹಾಲಂಬಿ ಅವರಿಗೆ ನೀಡುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಕಾರ್ಯವಾಗಿದೆ ಎಂದರು.
ಕವನ ವಾಚನ
ಕಾರ್ಯಕ್ರಮದಲ್ಲಿ ಶುಭಲಕ್ಷ್ಮೀ ಆರ್. ನಾಯ್ಕ್, ಪ್ರಜ್ವಲ್ ಶೆಣೈ, ವಾಸಂತಿ ಅಂಬಲಪಾಡಿ, ರಶ್ಮಿತಾ ಶೆಟ್ಟಿ ಇತರರು ದಿ. ಡಾ.ಉಪ್ಪಂಗಳ ರಾಮ ಭಟ್ ಅವರ ಕವನ ವಾಚಿಸಿದರು.
ಅಕಳಂಕ ಪ್ರಕಾಶನದ ಹಾಗೂ ಡಾ. ಉಪ್ಪಂಗಳ ರಾಮ ಭಟ್ ವಿರಚಿತ ಎರಡು ಕೃತಿಗಳನ್ನೊಳಗೊಂಡ ಒಳ-ಹೊರಗೆ ಪುಸ್ತಕವನ್ನು ಹಿರಿಯ ಸಾಹಿತಿ ಎಚ್. ಗೋಪಾಲ ಭಟ್ (ಕು.ಗೋ) ಬಿಡುಗಡೆ ಮಾಡಿದರು. ಪೂರ್ಣಿಮಾ ಜೆ. ಕೊಡವೂರು ಪುಸ್ತಕ ಪರಿಚಯಿಸಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ದತ್ತಿ ದಾನಿಗಳಾದ ಶಂಕರಿ ಉಪ್ಪಂಗಳ ರಾಮ ಭಟ್, ರಾಜೇಶ್ ಯು. ಕಸಾಪ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಭಾಷಣದೊಂದಿಗೆ ಸ್ವಾಗತಿಸಿದರು. ಪ್ರತ್ಯೂಷಾ ಶೆಣೈ ಪ್ರಾರ್ಥಿಸಿದರು. ಸುವೃತಾ ಅಡಿಗ ಪ್ರಶಸ್ತಿ ಪತ್ರ ವಾಚಿಸಿದರು. ಮನೋಹರ್ ಪಿ. ಭಟ್ ವಂದಿಸಿದರು. ಸತೀಶ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.
ಅಕಲಂಕ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಾಹಿತಿ ಇಂದಿರಾ ಹಾಲಂಬಿ ಮಾತನಾಡಿ, ಡಾ. ಉಪ್ಪಂಗಳ ಅವರು ಪರೋಪಕಾರಿಯಾಗಿದ್ದರು. ವಿವಿಧ ಭಾಷಾ ತಜ್ಞರಾಗಿಯೂ, ಮಹಾನ್ ಪಂಡಿತರಾಗಿಯೂ ಸಾಮಾನ್ಯರಂತೆ ಇದ್ದರು. ನಾನೇನೂ ಮಹಾನ್ ಸಾಹಿತಿಯಲ್ಲ. ಶಿಕ್ಷಕಿಯಾಗಿದ್ದ ನಾನು ಮಕ್ಕಳಿಗಾಗಿಯೇ ಸದಭಿರುಚಿಯ ಸಾಹಿತ್ಯ ರಚಿಸಿದ್ದೇನೆ. ಶಿಶು ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯವನ್ನು 2ನೇ ದರ್ಜೆಯಲ್ಲಿ ನೋಡುವುದು ಸರಿಯಲ್ಲ. ಇಂದಿನ ಮಕ್ಕಳು ಅಪರಾಧ ಪ್ರಕರಣದಲ್ಲಿ ಹೆಚ್ಚು ಭಾಗಿಯಾಗುತ್ತಿದ್ದಾರೆ. ಹೀಗಾಗಿ ದೇಶದ ಭವಿಷ್ಯಕ್ಕಾಗಿ ಬಾಲ್ಯದಲ್ಲಿಯೇ ಮಕ್ಕಳನ್ನು ಶಿಕ್ಷಕರು, ಪಾಲಕರು ತಿದ್ದಬೇಕಾದ ಅಗತ್ಯತೆ ಇದೆ ಎಂದರು.
ನನಗೀಗ 87 ವರ್ಷ. ಆದರೂ ಓದುವ, ಜನರಿಗೆ ಓದಿಸುವ ಕಾರ್ಯ ಮಾಡುತ್ತಲೇ ಇದ್ದೇನೆ. ಜನರು ನನ್ನನ್ನು ತುಂಬ ಪ್ರೀತಿಸುತ್ತಾರೆ. ಹೀಗಾಗಿ ನನಗೆ ಇನ್ನೂ 13 ವರ್ಷ ಬದುಕಬೇಕೆಂಬ ಆಸೆಯಿದೆ. ದೇವರು ಆಯಸ್ಸು ಕರುಣಿಸಿದರೆ ಮತ್ತೆ ಪುಸ್ತಕ ಹಂಚುವ ಕೆಲಸ ಮುಂದುವರಿಸುತ್ತೇನೆ. ಎಚ್.ಗೋಪಾಲ ಭಟ್ (ಕು.ಗೋ).ಹಿರಿಯ ಸಾಹಿತಿ, ಉಡುಪಿ