Heggunge charitable trust logo 
ಜಿಲ್ಲೆ

ಶಿಕ್ಷಣ ಕ್ಷೇತ್ರದ ಹೆಗ್ಗುರುತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ

ಕುಂದಾಪುರ: ಶಾಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕ ಹೆಗ್ಗುಂಜೆ ರಾಜೀವ ಶೆಟ್ಟಿ ಹೆಸರಲ್ಲಿ ಸ್ಥಾಪನೆಯಾದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಗುರುತು ಮೂಡಿಸುತ್ತಿದೆ.

ಶಾಲಾ ಕಟ್ಟಡ, ಸಮವಸ್ತ್ರ, ವಿದ್ಯಾರ್ಥಿವೇತನ, ಬಿಸಿಯೂಟಕ್ಕೆ ಸಹಾಯಹಸ್ತ ಮೂಲಕ ಗುರುತಿಸಿಕೊಂಡ ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ದಾನವೇ ಪ್ರಮುಖವೆಂದು ನಂಬಿದ್ದ ಶಾಲಾ ಶಿಕ್ಷಕ ದಿ.ಹೆಗ್ಗುಂಜೆ ರಾಜೀವ ಶೆಟ್ಟಿ ಅವರ ನೆನಪಿನಲ್ಲಿ ಪುತ್ರ ಎಚ್.ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ 2008ರಲ್ಲಿ ನೋಂದಾಯಿಸಲ್ಪಟ್ಟಿತು.

ವಿಶಿಷ್ಟ ಗುರುತುಗಳು

ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ ನೆರವಿನೊಂದಿಗೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ಶಾಲಾ ಕಟ್ಟಡ ನಿರ್ಮಾಣ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಉಚಿತ ವಿತರಣೆ, ವಿದ್ಯಾರ್ಥಿ ವೇತನ, ಮಧ್ಯಾಹ್ನ ಊಟಕ್ಕೆ ದೇಣಿಗೆ, ಶಾಲಾ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಬಡ ಮತ್ತು ನಿರ್ಗತಿಕರಿಗೆ ವೈದ್ಯಕೀಯ ನೆರವು, ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಾಣ, ಕರೊನಾ ಸಂಕಷ್ಟ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ ದಾನ ಇತ್ಯಾದಿ ಸೇವೆಗಳೊಂದಿಗೆ ಗುರುತಿಸಲ್ಪಟ್ಟಿದೆ.

ಸೊಸೈಟಿ 2022-23ನೇ ಸಾಲಿನಲ್ಲಿ ವಿದ್ಯಾರ್ಥಿ ಅಭ್ಯುದಯದ ಹಲವಾರು ಚಟುವಟಿಕೆಗಳಿಗೆ ಈಗಾಗಲೇ ಏಳು ಕೋಟಿ ರೂ. ದೇಣಿಗೆ ನೀಡಿದೆ. ಉಡುಪಿ ಜಿಲ್ಲೆಯ 350 ಶಾಲೆಗಳ ವಿದ್ಯಾರ್ಥಿಗಳಿಗೆ 2022-23ನೇ ಸಾಲಿಗೆ ಉಚಿತ ಸಮವಸ್ತ್ರ ವಿತರಿಸಿದೆ. ಹಾಲಾಡಿ ಸರ್ಕಾರಿ ಪ್ರೌಢಶಾಲೆ ವಿಭಾಗ ಒಳಗೊಂಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿ, ಭಂಡಾರ್‌ಕಾರ್ಸ್ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 10 ಲಕ್ಷ ರೂ. ವಿದ್ಯಾರ್ಥಿ ವೇತನ ಹಾಗೂ ಮಧ್ಯಾಹ್ನ ಬಿಸಿ ಊಟ ಯೋಜನೆಗೆ 1 ಲಕ್ಷ ರೂ. ದೇಣಿಗೆ, ಉಡುಪಿ ನಿಟ್ಟೂರು ಎಜುಕೇಷನ್ ಅಧೀನದ ನಿಟ್ಟೂರು ಅನುದಾನಿತ ಪ್ರೌಢಶಾಲೆ ಸಭಾಂಗಣ ನಿರ್ಮಾಣಕ್ಕೆ 1 ಕೋಟಿ ರೂ. ಆರ್ಥಿಕ ಸಹಾಯ, ಯಲ್ಲಾಪುರ ವಿಶ್ವದರ್ಶನ ಎಜುಕೇಷನ್ ಸೊಸೈಟಿ ವಿದ್ಯಾರ್ಥಿ ವಸತಿಗೃಹ ನಿರ್ಮಾಣಕ್ಕೆ 2 ಕೋಟಿ ರೂ. ಆರ್ಥಿಕ ಸಹಾಯವನ್ನು ಸಂಸ್ಥೆ ನೀಡಿದೆ.

ಸರ್ಕಾರಿ-ಖಾಸಗಿ ಸಹಭಾಗಿತ್ವ

ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಬ್ರಹ್ಮಾವರ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯೊಂದಿಗೆ ಸೊಸೈಟಿ ಒಡಂಬಡಿಕೆ ಮಾಡಿಕೊಂಡಿದ್ದು, 3 ಕೋಟಿ ರೂ. ಆರ್ಥಿಕ ಸಹಾಯ ಘೋಷಿಸಿದೆ.

41 ಸಾವಿರ ಸಮವಸ್ತ್ರ ವಿತರಣೆ

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟಸ್ಟ್ ವತಿಯಿಂದ ಜಿಲ್ಲೆಯ 325 ಅನುದಾನಿತ ಪ್ರಾಥಮಿಕ ಶಾಲೆ, ಅನುದಾನಿತ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 41 ಸಾವಿರ ಜೊತೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಜುಲೈ 8ರಂದು ಬೆಳಗ್ಗೆ 10.30ಕ್ಕೆ ಕುಂದಾಪುರ ಅಂಕದಕಟ್ಟೆ ಸಹನಾ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಖಜಾಂಚಿ ರಾಜೀವ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಶಾಸಕರಾದ ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಎ.ಸುವರ್ಣ, ಗುರುರಾಜ್ ಎಸ್. ಗಂಟೆಹೊಳೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ , ಡಿಡಿಪಿಐ ಗಣಪತಿ ಕೆ. ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸಂಸ್ಥೆಯ ಪ್ರಥಮ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿಯನ್ನು ನಿವೃತ್ತ ಮುಖ್ಯಶಿಕ್ಷಕ, ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು. ಟ್ರಸ್ಟ್ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.