ಜಿಲ್ಲೆ

ಕೃಷಿಕರಿಗೆ 100 ಹಳ್ಳಿಕಾರ್ ರಾಸುಗಳ ವಿತರಣೆ

ಮೈಸೂರು: ಬನ್ನೂರಿನ ಗಂಗಾ ಸೇನೆ, ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ರಾಸುಗಳ ಗೋದಾನ ಕಾರ್ಯಕ್ರಮವನ್ನು ಸೆ.24ರಂದು ಸಂಜೆ 4ಕ್ಕೆ ಬನ್ನೂರಿನ ಹಾಲಿನ ಡೇರಿ ಬಳಿ ಆಯೋಜಿಸಲಾಗಿದೆ.


ಗಂಗ ಅರಸರ ಸಂಸ್ಕೃತಿಯಾದ ಹಳ್ಳಿಕಾರ್ ತಳಿಯನ್ನು ಉಳಿಸಿ ಬೆಳೆಸಲು ಮತ್ತು ಗಂಗರ ಆಡಳಿತ ವೈಭವ ಜನರಿಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ತಳಿ ವಿತರಣೆಗೆ ಅನ್ಯರಾಜ್ಯ, ಅಂತರ ಜಿಲ್ಲೆಯ ಕೃಷಿಕರನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಗಂಗಾ ಸೇನೆಯ ಅಧ್ಯಕ್ಷ ಡಾ.ರಾಹುಲ್‌ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

100 ರಾಸು ಖರೀದಿ


ಮಾರುಕಟ್ಟೆಯಲ್ಲಿ ಹಳ್ಳಿಕಾರ್ ತಳಿಯ ರಾಸುವೊಂದರ ಬೆಲೆ 25,000ರಿಂದ 30,000 ರೂ.ಇದೆ. ಕೃಷಿಕರಿಗೆ ವಿತರಣೆ ಮಾಡಲು 100 ರಾಸುಗಳನ್ನು ಖರೀದಿ ಮಾಡಲಾಗಿದೆ. ತಳಿ ಸಂರಕ್ಷಣೆಗಾಗಿ ಈ ಉಪಕ್ರಮ ಕೈಗೊಂಡಿದ್ದು, ನಾವು 7 ಜೊತೆ ಹಳ್ಳಿಕಾರ್ ತಳಿ ರಾಸುಗಳನ್ನು ಸಾಕುತ್ತಿದ್ದೇವೆ ಎಂದು ತಿಳಿಸಿದರು.

ರೈತ ಸಂಘದಿಂದ ಉತ್ತೇಜನ


ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಸಂಕಷ್ಟಕ್ಕೆ ಸಿಲುಕಿಕೊಂಡಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಂಗಾಲಾಗಿರುವ ರೈತರಿಗೆ ಪರ್ಯಾಯ ಮಾರ್ಗ ಕಲ್ಪಿಸಿಲು ಸುಭಾಶ್ ಪಾಳೇಕಾರ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಗೆ ರೈತ ಸಂಘದಿಂದ ಉತ್ತೇಜನ ನೀಡಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ರೈತರಿಗೆ ಉಚಿತವಾಗಿ ಹಳ್ಳಿಕಾರ್ ರಾಸು ವಿತರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.


ಕಾರ್ಯಕ್ರಮವನ್ನು ಪಶು ಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನಾಯಕ ನಟ ದರ್ಶನ್, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸ್ವರಾಜ್ಯ ಇಂಡಿಯಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಾಮರಸಮಾಲಿ ಪಾಟೀಲ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.


ಸಂಘದ ನೈಸರ್ಗಿಕ ಕೃಷಿ ವಿಭಾಗದ ಅಧ್ಯಕ್ಷ ಬನ್ನೂರು ಕೃಷ್ಣಪ್ಪ, ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮುಖಂಡರಾದ ಪಿ.ಮರಂಕಯ್ಯ, ಪ್ರಭಾಕರ್, ಚಂದ್ರಶೇಖರ್ ಇನ್ನಿತರರಿದ್ದರು.