ಮಂಗಳೂರು: ಕೇಂದ್ರ ಸರ್ಕಾರವು 2025ಕ್ಕೆ ಭಾರತದಲ್ಲಿ ಕ್ಷಯ ಮುಕ್ತ ಭಾರತ ಮಾಡುವ ಗುರಿ ಹೊಂದಿದ್ದು, ಈ ಯೋಜನೆಗೆ ಪೂರಕವಾಗಿ ಕೆಐಒಸಿಎಲ್ ವತಿಯಿಂದ ನಿ-ಕ್ಷಯ್ ಮಿತ್ರ ಯೋಜನೆಯಡಿ ಪೌಷ್ಟಿಕ ಆಹಾರ ಕಿಟ್‌ವಿತರಣೆ ಕಾರ್ಯಕ್ರಮ ದ.ಕ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕೆಐಒಸಿಎಲ್ ವತಿಯಿಂದ ನಿ-ಕ್ಷಯ್ ಮಿತ್ರದಡಿ ಜಿಲ್ಲೆಯ ಒಟ್ಟು 535 ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಪೊಟ್ಟಣ ವಿತರಿಸಲಾಯಿತು. ಪೌಷ್ಟಿಕ ಆಹಾರ ಪೊಟ್ಟಣ ವಿತರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ನಿಗದಿತ ಔಷಧದ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆಯಿಂದ ಕ್ಷಯ ರೋಗವನ್ನು ಆದಷ್ಟು ಶೀಘ್ರ ನಿರ್ಮೂಲ ಮಾಡಬಹುದಾಗಿದೆ. ಕ್ಷಯ ಮುಕ್ತ ಭಾರತ ಮಾಡುವ ಗುರಿ ಯೋಜನೆಗೆ ಕೆಐಒಸಿಎಲ್ ಅವರ ನಿ-ಕ್ಷಯ್ ಮಿತ್ರ ಯೋಜನೆ ಪೂರಕವಾಗಿ ಸಹಕಾರಿಯಾಗಿದೆ. ನಿ-ಕ್ಷಯ್ ಮಿತ್ರ ಎಂದರೆ ಕ್ಷಯರೋಗವನ್ನು ಕೊನೆಗಾಣಿಸಲು ಮಾಡುವ ಜೊತೆಗಾರ ಎಂದರ್ಥ. ಕೆಐಒಸಿಎಲ್ ಕ್ಷಯರೋಗವನ್ನು ಕೊನೆಗಾಣಿಸಲು ಜೊತೆಗಾರನಾಗಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಕಾರ್ಯ. ಈ ಯೋಜನೆಯಲ್ಲಿ ಕ್ಷಯರೋಗಿಗೆ ಕನಿಷ್ಠ 6 ತಿಂಗಳಿನಿಂದ ಮೂರು ವರ್ಷದವರೆಗೆ ಪೌಷ್ಟಿಕ ಆಹಾರ, ಜವಾಬ್ದಾರಿಯೂ ವಿತರಣೆ, ರೋಗ ನಿರ್ಣಯಕ್ಕೆ ಸಹಾಯ ಮಾಡುವುದು, ಉದ್ಯೋಗ ಕೊಡಿಸುವುದು ಕಡ್ಡಾಯವಾಗಿರುತ್ತದೆ. ಖಾಸಗಿ ಸಂಸ್ಥೆಯವರು, ಕೈಗಾರಿಕೋದ್ಯಮಿಗಳು, ರಾಜಕಾರಣಿ ಳು, ಸೇವಾ ಸಂಸ್ಥೆಯವರು ಹಾಗೂ ಇನ್ನಿತರರು ವೈಯಕ್ತಿಕವಾಗಿಯೂ ಈ ಯೋಜನೆಗೆ ಕೈ ಜೋಡಿಸಬಹುದಾಗಿದೆ. ಇದರಿಂದ ಅವರಿಗೆ ಆದಾಯ ತೆರಿಗೆ, ವಿನಾಯಿತಿ ಮತ್ತು ಕೇಂದ್ರಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಮಾತನಾಡಿ, ಕ್ಷಯರೋಗ ನಿವಾರಣೆಗೊಳಿಸುವ ಜವಾಬ್ದಾರಿ ಕೇವಲ ಆರೋಗ್ಯ ಇಲಾಖೆಯದ್ದಲ್ಲ, ಇದರಲ್ಲಿ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿಯೂ ಇದೆ ಎಂದರು.
ಕೆಐಒಸಿಎಲ್ ಸಂಸ್ಥೆಯ ಅಧ್ಯಕ್ಷ ಟಿ. ಸಾಮಿನಾಥನ್, ಕೆಐಒಸಿಎಲ್ ನಿರ್ದೇಶಕರು, ಸಿಆರ್‌ಎಸ್ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್. ವಂದಿಸಿದರು.
----------------
ಪೌಷ್ಟಿಕ ಆಹಾರದ ವಿತರಣೆಯಿಂದ ಕ್ಷಯ ಮುಕ್ತ ಸಮಾಜ ಮಾಡಲು ಸಹಕಾರಿಯಾಗಬಹುದು. ಪೌಷ್ಟಿಕ ಆಹಾರ ಕಿಟ್‌ವಿತರಣೆ ಸೇರಿದಂತೆ ಅನೇಕಾ ಸೇವಾಕಾರ್ಯಗಳಿಗೆ ಕೆಐಒಸಿಎಲ್ ಸಂಸ್ಥೆಯು ಸದಾ ಮುಂದಿದ್ದು, ಈ ಹಿಂದೆಯೂ ಸಹ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಪ್ಲಾಂಟ್ ಒದಗಿಸಿದೆ. ಜನರಿಗೆ ಅಗತ್ಯ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ವೆಸ್ಲಾಕ್ ಆಸ್ಪತ್ರೆಗೆ ಮೆಡಿಕಲ್ ಉಪಕರಣಗಳನ್ನು ನೀಡಿದೆ.
ಟಿ. ಸಾಮಿನಾಥನ್, ಕೆಐಒಸಿಎಲ್ ಸಂಸ್ಥೆಯ ಅಧ್ಯಕ್ಷ