Distribute at jadigenhalli sports equipment  
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಹೆಚ್ಚಲಿ ಕ್ರೀಡಾಸಕ್ತಿ

ಶಿವರಾಜ.ಎಂ

ಶಾಸಕ ಶರತ್‌ಬಚ್ಚೇಗೌಡ ಸಲಹೆ

ಕ್ರೀಡಾ ಸಾಮಗ್ರಿ ವಿತರಣೆ


ವಿಜಯವಾಣಿ ಸುದ್ದಿಜಾಲ ಜಡಿಗೇನಹಳ್ಳಿ
ಅಮೃತ ಗ್ರಾಮ ಯೋಜನೆಯಡಿ ಓರೋಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ 6.50 ಲಕ್ಷ ರೂ.ಮೌಲ್ಯದ ಕ್ರೀಡಾ ಸಾಮಗ್ರಿ ವಿತರಿಸಲಾಗಿದ್ದು, ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು.
ಹೋಬಳಿಯ ಓರೋಹಳ್ಳಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.
ಓರೋಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಳೆ ಬಂದರೆ ಸೋರುತ್ತದೆ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ. ಶೀಘ್ರವೇ ಕೊಠಡಿಗಳನ್ನು ದುರಸ್ತಿ ಮಾಡಲಾಗುವುದು, ಅಂಗನವಾಡಿ ಕಟ್ಟಡ ನಿರ್ಮಿಸಲು ಉತ್ತಮ ಸ್ಥಳ ಗುರುತಿಸಿದರೆ ಶೀಘ್ರ ಕಟ್ಟಡ ನಿರ್ಮಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕ್ರೀಡೆಗಳು ಬಹಳ ಮುಖ್ಯ: ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳು ಕ್ರೀಡಾಚಟುವಟಿಕೆಗಳ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು, ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೆರವಿಗೆ ಬರಲಿದೆ ಎಂದು ಓರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಂಜುನಾಥ್ ಕಿವಿಮಾತು ಹೇಳಿದರು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಬೇಕು ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.